ಕನ್ನಡದ ಓದುಗರಿಗೆ ಚಿರಪರಿಚಿತರಾದ ಡಾ.ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಪ್ರಸ್ತುತ ಸರಳಾದೇವಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯರಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸಮಾಧಿ ಮೇಲಿನ ಹೂ, ಉರಿವ ಬೆಂಕಿಗೆ ಮೈಯೆಲ್ಲ ಬಾಯಿ ಎಂಬ ಎರಡು ಕಥಾ ಸಂಕಲನ ಹೊರತಂದಿರುವ ಇವರು “ಸಮುದ್ರದ ತೆರೆಯ ಸರಿಸಿ” ಎಂಬ ಹೊಸ ಕಥಾ ಸಂಕಲನ ಪ್ರಕಟಿಸಿದ್ದಾರೆ. ಇಲ್ಲಿನ ಅನೇಕ ಕಥೆಗಳು ಸುಧಾ, ಕನ್ನಡ ಪ್ರಭ, ಬುಕ್ ಬ್ರಹ್ಮದಲ್ಲಿ ಪ್ರಕಟ ಗೊಂಡಿವೆ. ಮಹಿಳಾ ಸಂವೇದನೆಯನ್ನು ಒಳಗೊಂಡಿರುವ ಇಲ್ಲಿನ ಹತ್ತು ಕಥೆಗಳು ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಲೇಖಕಿಯೇ ಹೇಳುವಂತೆ ಕಥಾ ಸಂಕಲನದ ಕತೆಗಳಲ್ಲಿನ ಪಾತ್ರಗಳು ನನ್ನ ಸುತ್ತಮುತ್ತಲಿನ ಜನರೇ ಆಗಿದ್ದಾರೆ. ಒಮ್ಮೊಮ್ಮೆ ಅದು ನನ್ನದೇ ಆತ್ಮಕತೆಯಂತೆ ಮನದ ಮೂಲೆಯಿಂದ ಒಮ್ಮೆಲೆ ಚಿಮ್ಮಿ ಬಂದು ಪಾತ್ರವೇ ನಾನಾಗುವ ಕತೆಗಳೂ ಇಲ್ಲಿವೆ.
ಸಂಕಲನಕ್ಕೆ ಮೊದಲ ಮಾತುಗಳನ್ನಾಡಿದ ಎಸ್.ಆರ್.ವಿಜಯಶಂಕರ, “ಇಲ್ಲಿನ ಹತ್ತು ಕತೆಗಳಲ್ಲಿ ಹೆಣ್ಣಿನ ಬಾಳಿನ ಹತ್ತಾವತಾರದ ಹಲವು ರೂಪಗಳು ಕಾಣಸಿಗುತ್ತವೆ. ಅವರ ಕತೆಗಳನ್ನು ಹೀಗೆ ಒಟ್ಟಿಗೆ ಓದಿದ್ದರಿಂದ ಸ್ತ್ರೀವಾದಿ ನಿಲುವಿನ ಹಲವು ಶೋಧಗಳು ನನಗೆ ಇನ್ನಷ್ಟು ಸ್ಪಷ್ಟವಾಯಿತು” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಸಂಕಲನದ ಮೊದಲ ಕತೆ ಸಾವೆಂಬ ಬಯಲು ಮನುಷ್ಯ ಜಗತ್ತಿನ ವಿಕ್ಷಿಪ್ತ ಮನಸ್ಥಿತಿಗಳನ್ನು ಬಯಲು ಮಾಡುತ್ತದೆ. ಕನಕಮಾಲಾ ಎಂಬ, ಎಲ್ಲರಿಗೂ ಬೇಕಾದ ಹೆಣ್ಣುಮಗಳೊಬ್ಬಳು, ಬೆಳ್ಳಂಬೆಳಿಗ್ಗೆ ತೀರಿಕೊಂಡ ಸುದ್ದಿ, ದೇವನಹಳ್ಳಿಯ ಮನೆಮನೆಗೂ ತಲುಪುತ್ತದೆ. ಕನಕಮ್ಮನನ್ನು ಜಗುಲಿಯ ಮೇಲೆ ಮಲಗಿಸಿ, ಆಕೆಯ ಕುರಿತಾಗಿ ಜನರಾಡುವ ಮಾತುಗಳು ಹೇಗಿದ್ದವು ಎಂಬುದಕ್ಕೆ ಈ ಸಾಲು ರೂಪಕವಾಗಿ ನಿಲ್ಲುತ್ತದೆ. ಈ ಸಾವು ಎಷ್ಟೋ ವರ್ಷದಿಂದ ಈ ಊರಿಗೆ ಬಾರದವರೆಲ್ಲಾ ಕಾಲಿಡುವಂತೆ ಮಾಡಿತ್ತು. ಇಲ್ಲಿ ಸಾವಿನಮನೆ ಕೂಡಾ ಬಹುಕಾಲ ಕಡಿದುಕೊಂಡಿದ್ದ ಬಂಧಗಳು ಬೆರೆಯುವಲ್ಲಿ, ಕಷ್ಟಸುಖ ಹಂಚಿಕೊಳ್ಳುವಲ್ಲಿ ಕಾರಣವಾಗುತ್ತದೆ ಎಂಬುದಕ್ಕೆ ಈ ಸಾಲು ಸಾಕ್ಷಿಯಾಗುತ್ತವೆ.
ಸಾವಿನ ಮನೆಯ ಸೂತಕ, ಊರಿನ ಪಡಿಪಾಟಲುಗಳು, ಗಾಳಿಸುದ್ದಿ, ಬದಲಾವಣೆ, ವೈಯಕ್ತಿಕ ತೊಂದರೆ, ರೀತಿ ರಿವಾಜುಗಳು ಎಲ್ಲವನ್ನು ಕಟ್ಟಿಕೊಡುವ ಕಥೆಯಲ್ಲಿನ ದೃಶ್ಯ ಸಂಭಾಷಣೆಗಳು ಹೊಸದೊಂದು ಲೋಕ ತೆರೆದಿಡುತ್ತವೆ. ಕನಕಮ್ಮನ ಅಣ್ಣ ಕಾಂತಣ್ಣ ಅಡುಗೆಭಟ್ಟ. ತಂಗಿಯನ್ನು ಕಳೆದುಕೊಂಡ ದುಃಖದಲ್ಲೂ ಸೇರಿದ ಜನರ ಬಗ್ಗೆ ಅವನು ತೋರುವ ಅನುಕಂಪ, ಔದಾರ್ಯ ಇಷ್ಟವಾಗುತ್ತದೆ. ಅಲ್ಲಿ ತವರ ಮನೆ ಸೀರೆ ಹಾಕಬೇಕಂತೆ ಬಾ ಅಂತ ಕಾಂತಣ್ಣನಿಗೆ ಕರೆ ಬಂದಾಗ ಆತ ಚಿತ್ರಾನ್ನ ಸಿದ್ಧಪಡಿಸುತ್ತಿದ್ದ. ಹೊಟೇಲಿಲ್ಲದ ಊರಲ್ಲಿ ಬಂದವರೆಲ್ಲ ಹಸಿದುಕೊಂಡಿರ್ತಾರೆ, ನನ್ನ ತಂಗಿ ಮನೆಗೆ ಬಂದವರನ್ನು ಉಪವಾಸ ಕಳಿಸುತ್ತಿರಲಿಲ್ಲ ಎಂದು ಹೇಳುತ್ತಾ ಎಲ್ಲರ ಹೊಟ್ಟೆ ತಣಿಸುವ ಕಾಯಕದಲ್ಲಿ ಆತ ತಲ್ಲೀನನಾಗಿದ್ದು ಕರುಳು ಚುರುಕ್ಕೆನ್ನಿಸುವಂತೆ ಮಾಡುತ್ತದೆ.
ರಂಜಾನ್ ಮತ್ತು ಕಾಶಂಬಿ ಕತೆಯು ಬಡ ಮುಸ್ಲಿಂ ಹೆಣ್ಣುಮಗಳೊಬ್ಬಳ ದಿಟ್ಟತನ, ಪ್ರಾಮಾಣಿಕತೆ, ಛಲದಿಂದ ಬದುಕು ಕಟ್ಟಿಕೊಳ್ಳುವ ಕುರಿತಾಗಿ ಹೆಣೆದು ಕೊಂಡಿದೆ. ಆಕಸ್ಮಿಕವಾಗಿ ಅಪಘಾತದಲ್ಲಿ ಗಂಡನನ್ನು ಕಳೆದುಕೊಳ್ಳುವ ಆಕೆ, ತನ್ನ ಮಕ್ಕಳಿಗಾಗಿ ಅವರಿವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ಬದುಕು ನಡೆಸಲು ಹೆಣಗುತ್ತಾಳೆ. ಇದೇ ಸಂದರ್ಭದಲ್ಲಿ ಪರಿಚಯವಾಗುವ ಅನಿತಾ, ಆಕೆಯ ಕೆಲಸದ ಮೇಲಿನ ಶ್ರದ್ಧೆ, ಒಳ್ಳೆಯ ಗುಣ ಕಂಡು ಆತ್ಮೀಯಳಾಗುತ್ತಾಳೆ. ಇದ್ದಕ್ಕಿದ್ದಂತೆ ಕಾಶಂಬಿಯ ಮೇಲೆ ಹೆಣ್ಣುಮಗಳೊಬ್ಬಳು ತಾಳಿ ಚೈನು ಕದ್ದ ಆರೋಪವನ್ನು ಹೊರಿಸಿ ಸ್ಟೇಶನ್ ಮೆಟ್ಟಿಲೇರುವಂತೆ ಮಾಡಿದಾಗ ದೇವರಂತೆ ಬಂದು, ಕಾಶಂಬಿಯೊಟ್ಟಿಗೆ ನಿಂತು, ಅವಳ ಪರ ಮಾತನಾಡಿ ಬಿಡಿಸಿಕೊಂಡು ಬರುತ್ತಾಳೆ. ಕೊನೆಗೆ ಆಕೆಯಲ್ಲಿನ ಪ್ರಾಮಾಣಿಕತೆ, ದುಡಿಮೆ ಒಂದೊಳ್ಳೆಯ ಸ್ಥಾನಕ್ಕೆ ನಿಲ್ಲಿಸುತ್ತದೆ. ಕಾಶಂಬಿಯನ್ನು ಅನಿತಾ ಒಮ್ಮೆ ನೀನೇಕೆ ರಂಜಾನಿನಲ್ಲಿ ಉಪವಾಸ ಇರುವುದಿಲ್ಲ? ಎಂದು ಪ್ರಶ್ನಿಸಿದಾಗ ಕಾಶಂಬಿ ನೀಡುವ ಉತ್ತರ ಎಲ್ಲರನ್ನೂ ಬೆರಗುಗೊಳಿಸುತ್ತದೆ. “ಈ ಜನ್ಮದಲ್ಲಿ ಪಾಪವನ್ನು ಮಾಡಿಲ್ಲದ ನಾನು ರೋಜಾ ಮಾಡಿ ಏನು ಪ್ರಯೋಜನ? ಮುಂದಿನದ್ದು ಯಾರು ನೋಡಿದ್ದಾರಕ್ಕ? ನರಕ ನೋಡಿ ಬಂದಾಗಿದೆ, ಸ್ವರ್ಗ ಎಲ್ಲಿದೆಯೊ ಗೊತ್ತಿಲ್ಲ. ನನ್ನ ಕೆಲಸದಲ್ಲೆ ನಿಯತ್ತಿನಿಂದ ಅಲ್ಲಾಹನನ್ನು ಕಾಣತಿದ್ದೀನಿ. ದೇವರು ದುಡಿಯಲು ಶಕ್ತಿ ಕೊಟ್ಟರೆ ಸಾಕು” ಈ ಕತೆ ಪರಿಶ್ರಮದಿಂದ ದುಡಿದು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿ ನಿಲ್ಲುತ್ತದೆ.
ಹಾಡು ಹಕ್ಕಿಯ ಹಿಡಿದು ಹೊನ್ನ ಪಂಜರದಲ್ಲಿಟ್ಟರೆ ಹಾಡು ಹೊರಹೊಮ್ಮಬಹುದೆ? ಅಪಾರ ಉಡುಗೊರೆಗಳ ನೀಡಿ ಬದುಕ ಕೊಂಡರೂ ಮನಸ ಮೆಚ್ಚಿಸಬಹುದೆ? ಇಲ್ಲ ಎಂಬುದಕ್ಕೆ ಅಮೃತ ಪ್ರೀತಿ ಕತೆ ಉತ್ತರವಾಗುತ್ತದೆ. ರಾಣಿ ಅಮೃತಮತಿಯ ಅಂತರಂಗದ ತವಕ, ತಲ್ಲಣ, ವಿರಹ, ಪ್ರೀತಿಯ ತುಡಿತವನ್ನು ಬಣ್ಣಿಸುವ ಕತೆಯಿದು. ಮಹಾರಾಜನನ್ನು ಒಲ್ಲದ ಮನಸ್ಸಿನಿಂದ ವಿವಾಹವಾಗುವ ಆಕೆ, ಆತನಲ್ಲಿ ಯಾವ ಸುಖವನ್ನು ಕಾಣದೆ ಪರಿತಪಿಸುತ್ತಾಳೆ. ವಿರಹದುರಿಯಲ್ಲಿ ಬೇಯುವಾಗ ಜೀವಸಖನಂತೆ ಇದಿರಾಗುವವನು ಮಾವುತ ಅಷ್ಟಾವಕ್ರ. ಆತನ ಹುಚ್ಚು ಪ್ರೀತಿಯ ಹೊಳೆಯಲ್ಲಿ ಸಿಲುಕಿ ಹೊರಬರದಾದಾಗ ನಡೆಯುವ ಘಟನೆಗಳನ್ನು ಕತೆ ಬಿಚ್ಚಿಡುತ್ತದೆ. ಮೈಸೂರಿನ ಸಾಲಿಗ್ರಾಮದ ಅಂಜಿನಿ ಕಾರ್ಲೋಸ್ ಆಗಿ ಬದಲಾಗುತ್ತಾನೆ. ಹೆಣ ಹೂಳಲು ಗುಂಡಿ ತೋಡುವ ಕೆಲಸ ಮಾಡುತ್ತಿದ್ದ ಅವನ ಕುಟುಂಬ ಬೇಸತ್ತು ವಲಸೆ ಹೋಗುವಾಗ, ದಾರಿ ತಪ್ಪಿದ ಆತ ಅನಾಥಾಶ್ರಮ ಸೇರಿ, ಅಲ್ಲಿಂದ ದತ್ತು ಮೂಲಕ ಪೋರ್ಚುಗಲ್ ಸೇರಿ, ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿ ಟೂರಿಸ್ಟ್ ಗೈಡ್ ಆಗಿ ಕೆಲಸ ಮಾಡತೊಡಗುತ್ತಾನೆ. ಬಣ್ಣಗಳ ಭೇದಕ್ಕೆ ರೋಸಿ ಹೋಗಿ ತನ್ನ ಮೂಲ ತಂದೆ ತಾಯಿಯನ್ನು ಹುಡುಕುತ್ತಾ ಭಾರತಕ್ಕೆ ಬಂದ ಆತನಿಗೆ ಕಳೆದು ಹೋದ ತಂದೆ-ತಾಯಿ ಸಿಗುತ್ತಾರಾ? ಸಿಕ್ಕ ಮೇಲಿನ ಸನ್ನಿವೇಶ ಶೀರ್ಷಿಕೆ ಕತೆ ಸಮುದ್ರದ ತೆರೆಯ ಸರಿಸಿ ಓದಿ ತಿಳಿಯಬೇಕು.
ಇದ್ದಕ್ಕಿದ್ದಂತೆ ಸುಮನ ಮಾನಸಿಕ ರೋಗಿಯಾದದ್ದದು ಏಕೆ ಎಂಬುದನ್ನು ಹೇಳ ಹೊರಡುವ ನೊಂದ ಮನದ ಮಾತು, ಹೆಣ್ಣಿನ ಸ್ವಾತಂತ್ರ್ಯ ಹಾಗೂ ಬಂಧಗಳ ಬಿಡುಗಡೆ ಕುರಿತಾಗಿರುವ ಕತೆ ಅಂತರಂಗದ ಪ್ರಭೆ ಬಹಿರಂಗವಾದಾಗ, ತಂದೆ, ತಾಯಿಯರ ಮಾತಿಗೆ ಕಟ್ಟುಬಿದ್ದು ಮದುವೆಯಾಗಿ ಮತ್ತೊಂದು ತುಂಬಿದ ಸಂಸಾರಕ್ಕೆ ಹೋಗಿ ಅಲ್ಲಿನ ಕಟ್ಟುಪಾಡು, ನಿಯಂತ್ರಣಗಳಿಗೆ ಸಿಕ್ಕು ಒದ್ದಾಡುವ ಹೆಣ್ಣೊಬ್ಬಳ ಕತೆ ತನುವೆಂಬ ಹಣತೆಯೊಳಗೆ ಪ್ರಾಣವೆಂಬ ಬತ್ತಿಯಿರಿಸಿ, ಕಾಲೇಜಿನಲ್ಲಿ ಒಟ್ಟಾಗಿದ್ದ ಸ್ನೇಹಿತೆಯರು ಬದುಕಿನ ಪಯಣದಲ್ಲಿ ಚದುರಿ ಹೋಗಿ ಜೀವನ ನಡೆಸುವಲ್ಲಿ ಕೆಲವೊಬ್ಬರು ಯಶಸ್ವಿಯಾದರೆ ಕ್ಲಾರಾ ಮಾತ್ರ ಸುಖ ಕಾಣದೆ ಒದ್ದಾಡಿ ಪ್ರಾಣ ಬಿಡುವ ಸಲ್ಲೇಖನ ಕತೆಗಳು ಓದಿಸಿಕೊಂಡು ಹೋಗುತ್ತವೆ. ಡಾ. ಪದ್ಮಿನಿ ನಾಗರಾಜು ಅವರ ಕಥನ ಪ್ರೀತಿಗೆ ಅಭಿನಂದಿಸುತ್ತಾ, ಮತ್ತಷ್ಟು ಕಥೆಗಳಿಗಾಗಿ ಇದಿರು ನೋಡುವೆ.
ನಾಗೇಶ್ ಜೆ.ನಾಯಕ, ವಿಮರ್ಶಕರು