Menu

ಬದುಕನ್ನು ಗೆಲ್ಲಬಲ್ಲ ಬದುಕನ್ನು ಬದಲಿಸಬಲ್ಲ ಆಶಯದ ಬದುಕಿಗೆ ಹತ್ತಿರವಾದ ಕಥೆಗಳು

ಬರಹವನ್ನು ಮೈಗೂಡಿಸಿಕೊಂಡು ನಿರಂತರ ಬರೆಯುವುದೆಂದರೆ ಅದೊಂದು ಸಿದ್ಧಿಯೂ ಹೌದು, ತಪಸ್ಸು ಹೌದು. ಯಾವುದೇ ಪ್ರಕಾರವಾದ ಬರಹವಾಗಲಿ ಅಲ್ಲೊಂದು ಗಟ್ಟಿತನ ಸಾಮುದಾಯಿಕವಾಗಿರಬೇಕು. ಭಾಷೆಯ ಹದವಾದ ಪ್ರೋಗತೆ ಸೆಳೆಯಬೇಕು. ಅಳಿಸಲಾಗದ ಲಿಪಿಯಾಗಿ ಬರೆದವರನ್ನು ಮತ್ತು ಓದುವ ಸಹೃದಯರನ್ನೂ ಗೆಲ್ಲಬೇಕು. ಗಮನಾರ್ಹ ಕೃತಿಗಳನ್ನು ಜಗತ್ತಿಗೆ ಕಾಣಿಕೆಯಾಗಿಸಿದವರ ಬರಹಗಳನ್ನು ಎಚ್ಚರಿಕೆಯಿಂದ ಓದುವ ಮನೋಗತವೂ ಇರಬೇಕು. ಅದು ಕಥೆಯಾಗಿರಿರಲಿ ಕವಿತೆಯಾಗಿರಲಿ, ನಾಟಕವೋ ಅನುವಾದವೋ, ಕಾದಂಬರಿಯೋ ವಿಮರ್ಶೆಯೋ ಮಕ್ಕಳ ಸಾಹಿತ್ಯವೋ ಯಾವುದೇ ಪ್ರಕಾರವಾಗಿರಲಿ, ಬದುಕಿಗೆ ಹತ್ತಿರವಾಗಿರಬೇಕು.

ಹೀಗಾಗಿಯೇ ಬರಹವೂ ಒಂದು ಗೆಲುವು. ಸಾಮ್ರಾಜ್ಯವನ್ನು ಗೆಲ್ಲುವುದಲ್ಲ. ಸಹೃದಯರ ಎದೆಯನ್ನು ಗೆಲ್ಲುವುದು. ಇಂತಹ ಗೆಲುವಿನ ಹಾದಿ ಹಿಡಿದು ಸಾಧಿಸಲು ಹೊರಟವರು ನಮ್ಮ ಯುವ ಲೇಖಕ ಹಸನಡೊಂಗ್ರಿ ಎಚ್. ಬೇಪಾರಿ ಅವರು.
ವೃತ್ತಿಯಲ್ಲಿ ಪತ್ರಕರ್ತರಾದರೂ ಪ್ರವೃತ್ತಿಯಲ್ಲಿ ಲೇಖಕ. ಈಗ ಬದುಕನ್ನು ಗೆಲ್ಲಬಲ್ಲ ಬದುಕನ್ನು ಬದಲಿಸಬಲ್ಲ ಮನೋಇಂಗಿತವನ್ನಿಟ್ಟು ಕೊಂಡು ಬರೆದ ಕಥೆಗಳೊಂದಿಗೆ ಮುಖಾಮುಖಿಯಾಗಿ ಎದುರಿಗೆ ತಮ್ಮ ಪ್ರಥಮ ಕಥಾ ಸಂಕಲನದೊಂದಿಗೆ ನಿಂತಿದ್ದಾರೆ. ಕಥೆಯು ಹೇಳುವ ಸಂದೇಶಕ್ಕೂ, ಸಿದ್ಧ ಮಾದರಿಯ ಲೇಖನವೊಂದು ಹೇಳುವ ಪರಿಪಾಠಕ್ಕೂ, ಪತ್ರಿಕಾ ವರದಿಗಳು ನೀಡುವ ಧ್ವನಿಗೂ ವ್ಯತ್ಯಾಸವಿದೆ ಎಂದು ಗಮನವಿರಿಸಿಕೊಂಡೇ ಕಥಾ ರಚನೆಗೆ ಇಳಿದ ಹಸನಡೊಂಗ್ರಿ ಬೇಪಾರಿಯವರು ನಾನು ಹತ್ತಿರದಿಂದ ಬಲ್ಲ ಉತ್ಸಾಹಿ ಯುವಕ. ಜಿಲ್ಲೆಯ ಸಾಹಿತ್ಯಿಕ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದವರು. ಬಾಗಲಕೋಟೆಯ ಅಮೀನಗಡ ಪಟ್ಟಣ ಸಿಹಿ ಕರದಂಟಿಗೆ ಪ್ರಸಿದ್ಧಿಯಾಗಿರುವಂತೆ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರಸಿದ್ಧಿ ಪಡೆದ ಊರು. ವಿಜ್ಞಾನ ಮತ್ತು ಪತ್ರಿಕೋದ್ಯಮದಲ್ಲಿ ಅಧ್ಯಯನ ಮಾಡಿ, ನಿರಂತರ ೧೪ ವರ್ಷಗಳಿಂದ ಪತ್ರಿಕಾ ಮಾದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಲ್ಲಿರುವ ಕಥಾ ಚೌಕಟ್ಟುಗಳನ್ನು ಗಮನಿಸಿದರೆ, ಎಲ್ಲ ಕಥೆಗಳೂ ನಮ್ಮ ದಿನನಿತ್ಯದ ಬದುಕಿನಲ್ಲಿ ಕಾಣುವ ಅನುಭವಿಸುವ ಮತ್ತು ಗಮನಿಸಿದ ಕಥಾ ವಸ್ತುಗಳೇ. ಇಂತಹ ಸಂಗತಿಗಳನ್ನೇ ಕಥೆ ಮಾಡಬೇಕೆನ್ನುವ ಬೇಪಾರಿಯವರ ಆಸಕ್ತಿಯನ್ನು ಗಮನಿಸಿದಾಗ ಅವರು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ ಅಂಶವೂ ವಿಶಿಷ್ಠವಾಗಿದೆ ಎನಿಸುತ್ತದೆ. ಇದು ಬೇಪಾರಿಯವರ ಮೊದಲ ಕಥಾ ಸಂಕಲನ. ಈ ಕಥಾ ಹಾದಿಯಲ್ಲಿ ಸಾಗುವಾಗ ಕಥೆಗಾರ ಕೆಲವು ಎಚ್ಚರಗಳನ್ನು ಇಟ್ಟುಕೊಂಡೇ ಅಪೇಕ್ಷಣಿಯ ಅಂಶಗಳನ್ನು ಪಾತ್ರ ವಾತಾವರಣವನ್ನು ಕಟ್ಟಬೇಕು. ಈ ಕಾರ್ಯವನ್ನು ಸೂಕ್ಷ್ಮವಾಗಿಯೇ ಕಟ್ಟಿಕೊಟ್ಟಿರುವುದರಿಂದ ಕಥೆಗಳು ತಮ್ಮ ಪಾಡಿಗೆ ಬೆಳವಣಿಗೆಯನ್ನು ಹೊಂದಲು ಕಾರಣ ಎಂಬುದು ನಾನು ಗಮನಿಸಿದ ಅಂಶವಾಗಿದೆ.

ಕಥೆಯಲ್ಲಿ ಕಾಲ್ಪನಿಕ ಹಂದರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಮೂರ್ತ ಬದುಕಿನ ಅಂಶಗಳನ್ನು ಗಮನಿಸುವುದು ಈ ಅಂಶಗಳನ್ನು ಗಮನಿಸಿಯೇ ವಾಸ್ತವವನ್ನು ತೆರೆದಿಡುವ ಪ್ರಯತ್ನ ಈ ಕಥೆಗಳಲ್ಲಿ ಕಂಡುಬರುತ್ತದೆ. ಕಥಾ ಸಂಕಲನ ಅಮ್ಮ ಎಂಬ ಕಡಲು ಹೆಸರೇ ಸೂಚಿಸುವಂತೆ ಅಮ್ಮನ ಬದುಕಿನ ನೆಲೆಯಲ್ಲಿ ಬದುಕನ್ನು ಕಟ್ಟಿಕೊಂಡ ಮಕ್ಕಳ ಜೀವನವನ್ನು ಸಮಾಜಮುಖಿಯಾಗಿಸುವ ಆಲೋಚನೆಗಳದ್ದು ಎಂದರೆ ತಪ್ಪಾಗದು. ಕೆಲವೊಮ್ಮೆ ನಮ್ಮೊಳಗಿನ, ನಮ್ಮ ಮನೆಯೊಳಗಿನ, ನಮ್ಮ ಸಮಾಜದೊಳಗಿನ ಮಗ್ಗಲು ಗೋಡೆಗಳೇ ಬೆಟ್ಟವಾಗಿ ದಾಟಲಾಗದೇ ಒದ್ದಾಡಿಸುವಂತವು. ಇಂತಹ ಅಡ್ಡ ಬಂದ ಸಂಗತಿಗಳನ್ನು ಎದುರಿಸುವ ಸನ್ನಿವೇಶಗಳನ್ನು ಸರಳವಾಗಿಯೂ, ಮತ್ತು ನೇರವಾಗಿಯೂ ಕಟ್ಟಿಕೊಟ್ಟಿರುವ ಕಥೆಗಳಿವು. ಯಾವುದೇ ರೀತಿಯ ಹೊಸತನದ ಪ್ರಯೋಗಕ್ಕೆ ಒಡ್ಡಿಲ್ಲ ಎಂದು ಕಥಾಯತ್ನಗಳನ್ನು ವಿಮರ್ಶಾ ದೃಷ್ಠಿಕೋನದಿಂದ ಕಾಣದೇ ಮನಸ್ಸು ಗ್ರಹಿಸಿದ ಸಂಗತಿಗಳಲ್ಲಿ ಕಥೆಗಳ ಜಾಡು ಹೇಗೆ ಅನವಶ್ಯಕ ಸಂಗತಿಗಳನ್ನು ದೂರಾಗಿಸುತ್ತದೆ ಎಂಬುದನ್ನು ಕಥಾ ತಿರುಳಾಗಿ ಇÀಲ್ಲಿ ಕಾಣಬಹುದು.

ಅಮ್ಮ ಎಂಬ ಕಡಲು ಪ್ರಾರಂಭವಾಗುವುದೇ ಕಾಲೇಜೊಂದರ ಉಪನ್ಯಾಸಕನಾದ ಮಹಾದೇವನಿಗೆ ಅವನ ತಾಯಿ ಸವಿತಾ ವೃದ್ಧಾಶ್ರಮದಲ್ಲಿ ಅನಾರೋಗ್ಯ ಪೀಡಿತಳಾಗಿ ಆಸ್ಪತ್ರೆಗೆ ದಾಖಲಾದ ಸುದ್ದಿಯೊಂದಿಗೆ. ಗಂಡನನ್ನು ಕಳೆದುಕೊಂಡ ಸವಿತಾ ಮಗ ಮಹಾದೇವನಿಗೆ ಉನ್ನತ ವಿದ್ಯಾಭ್ಯಾಸ ಮಾಡಿಸಿ, ಪ್ರತಿಷ್ಠಿತ ಕಾಲೇಜನಲ್ಲಿ ಉಪನ್ಯಾಸಕನ್ನಾಗಿ ಮಾಡಿ ಅವನು ಬದುಕು ಕಟ್ಟಿಕೊಳ್ಳಲು ಶ್ರಮವಹಿಸುತ್ತಾಳೆ. ನೌಕರಿ ಪಡೆದ ಮಗನೊಂದಿಗಿನ ಸಂಬಂಧ ಒಂದು ಕಡೆಯಾದರೆ, ಮನೆಗೆ ಬಂದ ಸೊಸೆಯ ಅಹಿತಕಾರಿ ಜಗಳಗಳಿಂದ ಮನನೊಂದು ತಾನೇ ಮಹಾದೇವನ ಗೆಳೆಯ ಸುನೀಲ್ ಮಾತಿಗೆ ಮನ್ನಣೆ ಕೊಟ್ಟು ಮಗ ಎಲ್ಲಾದರೂ ಇರಲಿ ಸುಖವಾಗಿರಲಿ. ನಾನು ದೂರವಾಗಿದ್ದರೆ ಅವರ ಸಂಸಾರ ಸುಖವಾಗಿರುವುದಾದರೆ ಅದಕ್ಕೆ ತಾನು ಸಿದ್ಧ, ಎಂದು ವೃದ್ಧಾಶ್ರಮ ಸೇರುತ್ತಾಳೆ. ಕಾರ್ಯಕ್ರಮವೊಂದಕ್ಕೆ ಮನೆಗೆ ಬಂದ ತಾಯಿಯ ಕುರಿತು ನೆರೆ ಹೊರೆಯ ಹೆಣ್ಣು ಮಕ್ಕಳ ಮುಂದೆ ಸೊಸೆ ತನ್ನ ಅತ್ತೆ ಮನೆಯಲ್ಲಿರುವುದಾಗಿ ಸುಳ್ಳು ಹೇಳುತ್ತಾಳೆ. ಸೊಸೆಯ ದೆಸೆಯಿಂದಲೇ ಮನೆ ಬಿಟ್ಟು ಹೋದ ತಾಯಿ ಸೊಸೆಯ ಈ ನಡವಳಿಕೆಯಿಂದ ನೊಂದುಕೊಳ್ಳುತ್ತಾಳೆ. ಮಗನು ಒಳ್ಳೆಯವನೆಂದು ಅಂತಃಕರುಣೆಯನ್ನು ಬಿಟ್ಟು ಕೊಡದ ತಾಯಿ ಸವಿತಾ, ನಂತರ ವೃದ್ಧಶ್ರಮದಲ್ಲಿಯೇ ಮರಣವಪ್ಪಿದಾಗ, ಮಗನದೇನು ತಪ್ಪಿಲ್ಲವೆಂದು ಮಗನಿಗೆ ಪತ್ರ ಬರೆದುದ್ದನ್ನು ಓದಿ, ಮಗ ತಾಯಿಯನ್ನು ಕ್ಷಮಿಸಲು ಕೇಳಿದರೂ ಕೇಳಿಸಿಕೊಳ್ಳದಂತೆ ತಾಯಿ ಇವನ್ನಿಲ್ಲವಾಗಿರುತ್ತಾಳೆ. . ನಾ ಸತ್ತರೂ ವೃಥಾ ವ್ಯಥೆ ಪಡಬಾರದು ಎಂದು ಬರೆದ ತಾಯಿ ಮಮತೆಗೆ ಕಣ್ಣೀರಾಗುತ್ತಾನೆ. ಸೊಸೆಯು ಪಶ್ಚಾತ್ತಾಪ ಪಟ್ಟರೂ ಅಷ್ಟರಲ್ಲೇ ಎಲ್ಲ ಮುಗಿದು ಹೋಗಿರುತ್ತದೆ. ಇದಿಷ್ಟು ಕಥೆಯಾದರೂ, ಕಷ್ಟ ಪಟ್ಟು ವಿದ್ಯಾಬ್ಯಾಸ ಮಾಡಿಸುವ ತಾಯಿಯಂದಿರು ಮಕ್ಕಳು ನೋಡಿಕೊಳ್ಳದಿದ್ದರೂ ತಮ್ಮ ಮಕ್ಕಳ ಮೇಲಿನ ಮೋಹವನ್ನು ಬಿಟ್ಟು ಕೊಡದಿರುವುದಕ್ಕೆ, ತಾನೂ ಹೆಣ್ಣಾದರೂ ಸೊಸೆಯಾಗಿ ಬಂದವಳು ಗಂಡನ ತಾಯಿಯಾದ, ತನ್ನ ಅತ್ತೆಯನ್ನು ಸರಿಯಾಗಿ ನೋಡಿಕೊಳ್ಳದೇ ಕುಟುಂಬ ಸಂಬಂಧಗಳನ್ನು ಕೊನೆ ಮಾಡಿಸುವ ಈ ಕಥೆ ನೇರವಾದ ನಿರೂಪಣೆಯಲ್ಲಿದ್ದರೂ ಮನವನ್ನು ಕಲುಕುವಂತದ್ದು. ತಾಯಿ ತನಗಾದ ತೊಂದರೆ ನೋವು ಕಷ್ಟಗಳನ್ನು ಮಕ್ಕಳ ಭವಿಷ್ಯಕ್ಕಾಗಿ ಸಹಿಸಿಕೊಂಡು ಬದುಕು ಕಟ್ಟಿಕೊಡುತ್ತಾಳೆ ಆದರೆ ಅವಳ ಯಾವ ಉಪಕೃತಿಯನ್ನು ಸ್ಮರಿಸದ ಮಕ್ಕಳು ವೃದ್ಧಶ್ರಮಕ್ಕೆ ಬಿಡುವ ಕಥೆ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

ಪರಿವರ್ತನೆ ಎಂಬ ಕಥೆಯ ನಡಿಗೆ ವಿಭಿನ್ನವಾದುದು. ಶಾಂತವಾಗಿದ್ದ ಮೊಹಲ್ಲಾ ಒಂದರ ನಾಯಕತ್ವ ವಹಿಸಿಕೊಂಡಿದ್ದ ನಾನಾಸಾಹೇಬ ಎಂಬ ವ್ಯಕ್ತಿ ಮಹಾತ್ವಾಕಾಂಕ್ಷೆಯಲ್ಲಿ ದೊಡ್ಡಸ್ಥಿಕೆ ತೋರಿಸಲು ಹೊರಟ ಕಥೆ. ಮಹಾತ್ಮರ ಜಯಂತಿಗೆ ಡಿಜೆ ತರಿಸಲು ಸಿದ್ಧನಾಗಿದ್ದ ಇವನ ಇಚ್ಚೆಯನ್ನು ಒಪ್ಪದ ಅದೇ ಮೊಹಲ್ಲಾದ ಮತ್ತೊಬ್ಬ ಪ್ರಜ್ಞಾವಂತ ಯುವಕ ಅಸದನ ಸಮಾಜದ ಕುರಿತಾದ ಹಿತಚಿಂತನೆ. ನಾನಾ ಸಾಹೇಬ ಡಿಜೆ ತರಿಸುವ ಹುನ್ನಾರದ ಹಿನ್ನಲೆ ಎಂದರೆ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವೋಟು ಪಡೆದು ಆರಿಸಿ ಬರುವುದು. ಸ್ವಾರ್ಥಕ್ಕಾಗಿ ಸಮಾಜದ ಜನರನ್ನು ತನ್ನತ್ತ ಒಲಿಸಿಸಕೊಳ್ಳುವುದು. ಆದರೆ ಅಸದನ ಪ್ರಾಮಾಣಿಕ ನಡೆ. ಮಹಾತ್ಮರ ಕುರಿತ ಉಪನ್ಯಾಸ ಏರ್ಪಡಿಸಿ ಜನರಲ್ಲಿ ಆದÀರ್ಶ ನಡೆ ನುಡಿಗಳನ್ನು ಕಟ್ಟಿಕೊಡುವುದು. ಡಿಜೆ ಹಚ್ಚಿ ಕುಣಿಯುವುದರಿಂದ ಆರ್ಥಿಕ ನಷ್ವಾಗುತ್ತದೆ, ಹಾಗೇ ಜೀವನ ಸಂದೇಶ ಸಮಾಜಕ್ಕೆ ಮುಟ್ಟಿದಂತಾಗದು ಎಂಬುದು ಯುವಕ ಅಸದನ ಅಭಿಪ್ರಾಯ. ಯಾರೇ ಏನೇ ಹೇಳಿದರೂ ತನ್ನ ಸರ್ವಾನುಮತದ ಅಭಿಪ್ರಾಯವನ್ನು ಹಿರಿಕರಿದ್ದ ಸಭೆಯ ಮುಂದಿಡುತ್ತಾನೆ ಅಸದ. ಪೋಲಿಸರೂ ಕೂಡಾ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ. ಆದರೂ ರಾಜಕೀಯ ಉಪಯೋಗಿಸಿ ಪೋಲೀಸರಿಗೂ ವಸೀಲಿ ಹಚ್ಚಿಸುತ್ತಾನೆ. ಅದೂ ನೆರವೇರದಿದ್ದಾಗ. ನಾನಾಸಾಹೇಬ ಹಾಗೂ ಅವನ ಹಿಂಬಾಲಕರು ಮೌನವಾಗುತ್ತಾರೆ. ವೈಯಕ್ತಿಕ ಸ್ವಾರ್ಥವಿಲ್ಲದೇ ಸಮಾಜದ ಹಿತಕ್ಕಾಗಿಯೇ ತನ್ನ ಅಭಿಪ್ರಾಯ ಹೇಳಿದ್ದಾಗಿ ಅಸದ ನಿರ್ಧಾರ ಬದಲಿಸುವುದಿಲ್ಲ. ಕೊನೆಗೆ ತನ್ನ ಮನೆಯ ಪುಟ್ಟ ಅಂಗಳದಲ್ಲಿಯೇ ಮಹಾತ್ಮರ ಜಯಂತಿ ಕಾರ್ಯಕ್ರಮ ಮಾಡುವ ಅಸದನಿಗೆ ಊರವರು ಸಹಕಾರ ನೀಡಿ ಕಾರ್ಯಕ್ರಮ ನಡೆಯಲು ಕಾರಣರಾಗುತ್ತಾರೆ. ಕೊನೆಗೆ ನಾನಾ ಸಾಹೇಬನೂ ತನ್ನ ವೈಯಕ್ತಿತ್ಕ ಅಹಂ ತೊರೆದು ಮಹಾತ್ಮರ ಜಯಂತಿ ಕಾರ್ಯಕ್ರಮಕ್ಕೆ ಬರುವುದು. ಎಲ್ಲವನ್ನೂ ಮರೆತು ಅಸದ ನಾನಾಸಾಹೇಬರನ್ನು ವೇದಿಕೆಯ ಮುಂದಿನ ಸಾಲಿನಲ್ಲಿ ಕೂಡಿಸಿ ಗೌರವ ಕೊಡುತ್ತಾನೆ. ಮೇಲ್ನೋಟಕ್ಕೆ ಇದೊಂದು ಮೊಹಲ್ಲದಲ್ಲಿ ನಡೆಯುವ ಕಥೆಯಾದರೂ ಸೌಹಾರ್ದಯುತ ಸಂಬAಧಗಳನ್ನು ಕಟ್ಟಿಕೊಳ್ಳುವಲ್ಲಿ ಯುವಕರ ಪಾತ್ರವನ್ನು ಮನದಟ್ಟು ಮಾಡುತ್ತದೆ. ಆದರ್ಶ ವ್ಯಕ್ತಿಗಳನ್ನು ವಿಜ್ರಂಭಿಸುವ ಡಿಜೆಯಿಂದ ಪರಿಚಯಿಸುವುದಲ್ಲ. ಅವರನ್ನು ಅವರ ಆದರ್ಶ ಜೀವನವನ್ನು ತಿಳಿಯುವ ಮೂಲಕ ಗೌರವಿಸುವುದು ಎಂಬ ಸಂದೇಶದ್ದು. ರಾಜಕೀಯದ ಬಗ್ಗೆ ಸಂಪೂರ್ಣವಾಗಿ ತಿಳಿವಳಿಕೆ ಹೊಂದದವರು ರಾಜಕೀಯ ಸನ್ನಿವೇಶಗಳನ್ನು ಹೇಗೆ ತಮ್ಮ ಲಾಭದಾಸೆಗೆ ಸೃಷ್ಠಿಸುತ್ತಾರೆ ಎಂಬುದನ್ನು ಪರಿಚಯಿಸುವ ಕಥೆ. ಅಷ್ಟೇ ಅಲ್ಲ ಪರಸ್ಪರ ಗೌರವ, ವಿಶ್ವಾಸ, ಪ್ರೀತಿ ಅಭಿಮಾನಗಳನ್ನು ಇಟ್ಟುಕೊಂಡು ಎಲ್ಲರೂ ಒಂದಾಗಿ ಸಮಾಜದ ಹಿತ ಚಿಂತನೆ ಮಾಡಬೇಕೆಂಬ ಸಂದೇಶದ್ದು.

ಹೀಗೆ ಇಲ್ಲಿರುವ ಬೆಟ್ಟಿಂಗ್, ಪಶ್ಚಾತ್ತಾಪ, ಬೆಳಕಿನ ಹಾದಿ, ಸ್ವಾಭಿಮಾನಿ, ಗೆಲುವಿನ ಹೆಜ್ಜೆ, ಅರಳಿದ ಹೂವು, ಗುಣವಂತ, ಪ್ರೀತಿಯೆಂಬುದು, ಆದರ್ಶ ಮುಂತಾದ ಕಥೆಗಳೆಲ್ಲವೂ ಹೇಳುವ ಸಾರವೆಂದರೆ ವ್ಯಕ್ತಿಗತ ಸಾಧ್ಯತೆಗಳಿಗಿಂತ ಸಾಮಾಜಿಕ ಹಿತವೇ ಮುಖ್ಯ ಎಂಬುವುದು. ಪ್ರೀತಿ ಎಂದರೆ ಅದೂ ಎಂದಿಗೂ ಬತ್ತದ ಸೆಲೆ.ಸ ನಿಜವಾದ ಪ್ರೀತಿ, ಕೊನೆಯಾಗುವಂತದ್ದಾಗಲಿ, ಮರೆಯುವಂತದ್ದಾಗಲೀ ಅಲ್ಲ. ಎನ್ನುತ್ತ, ಪ್ರೀತಿಸಿ ಆ ಪ್ರೀತಿ ದೊರೆಯದೇ ಇದ್ದಾಗ ಕೊನೆಯವರೆಗೂ ಅವಿಹಾಹಿತನಾಗಿ ಉಳಿಯುವ ಸಂಗಮೇಶ, ಊರಲ್ಲಿಯೇ ಇದ್ದು ಬದುಕು ಕಟ್ಟಿಕೊಂಡ. ಅರಳಿದ ಹೂವು ಕಥೆಯ ಪ್ರೀತಿಸಿದವಳು ಸಿಗಲಿಲ್ಲವೆಂದು ಮದುವೆಯಾದ ಸತಿಯನ್ನು ಮರೆತ ಗಂಡ ಶಂಕರಗೌಡನ ನಿರ್ಧಾರ ಬದಲಿಸಿ ಹೆಣ್ಣು ಮಗುವಿಗೆ ತಾಯಿಯಾಗಿ ಗಂಡ ಪ್ರೀತಿಸಿದ ಅನ್ನಪೂರ್ಣ ಹೆಸರನ್ನು ಮಗಳಿಗೆ ಇಟ್ಟು ಪ್ರೀತಿ ಸಾಯುವುದಿಲ್ಲ ಎಂದು ತೋರಿಸುವ ಕಥೆ. ಸ್ವಾಭಿಮಾನಿ ತಾಯಿ, ಸತ್ತರೂ ಮಗನ ಆಶ್ರಯಕ್ಕೆ ಹೋಗದೇ ಸಾವಿನಲ್ಲು ಆದರ್ಶ ಮೆರೆದ ಫಾತಿಮಾ ತನ್ನ ದೇಹ ದಾನ ಮಾಡಿದ ಕಥೆ ಇವೆಲ್ಲವೂ ನಮ್ಮ ಕಣ್ಣ ಮುಂದೆ ನಡೆದ ಘಟನೆಗಳಂತೆ ಓದುವಾಗ ಮನ ಕಲಕುತ್ತವೆ.

ಮಿಕ್ಕೆಲ್ಲ ಕಥೆಗಳಲ್ಲಿಯೂ ಒಂದಿಲ್ಲ ಒಂದು ಪಾತ್ರ ಗಮನಿಸುವಂತದ್ದು. ಕಥೆಯೊಂದನ್ನು ಹೇಳುವ ಮುನ್ನ ವಸ್ತು ಆಯ್ಕೆ ಎಷ್ಟು ಮುಖ್ಯವೋ ನಿರೂಪಣೆಯೂ ಅಷ್ಟೇ ಮಹತ್ವದ್ದು. ಈ ಹಿನ್ನಲೆಯಲ್ಲಿ ಮುಂಬರುವ ಕಥೆಗಳು ಇನ್ನೂ ಉತ್ತಮವಾಗಿ ಮೂಡಿಬರುವ ಭರವಸೆಯನ್ನು ಕಥೆಗಾರ ಹಸನಡೊಂಗ್ರಿ ಬೇಪಾರಿಯವರು ಸಾಬೀತು ಪಡಿಸಿದ್ದಾರೆ. ಪ್ರಥಮ ಕಥಾ ಸಂಕಲನ ಅಮ್ಮ ಎಂಬ ಮಡಿಲು ಸಹೃದÀಯರ ಮನಗೆಲ್ಲಲಿ. ಒಂದು ಕಥಾ ಸಂಕಲನ ಹತ್ತಾಗಲಿ. ಇನ್ನಿಷ್ಟು ವಿಭಿನ್ನ ಹೊಸ ನಿರೂಪಣೆಯ ಕಥೆಗಳನ್ನು ಓದಿ, ಓದಿಸುವ ಮೂಲಕ ಕನ್ನಡಕ್ಕೆ ಇನ್ನೊಬ್ಬ ಕಥೆಗಾರರಾಗಿ ಬೇಪಾರಿಯವರು ಕಥಾ ಸಾಹಿತ್ಯ ಲೋಕದಲ್ಲಿ ಗಟ್ಟಿ ಹೆಜ್ಜೆಗಳನ್ನು ಬೇರೂರಿಸಲಿ ಎಂದು ಹಾರೈಸುವೆ.

  • ಡಾ.ಲಲಿತಾ.ಕೆ ಹೊಸಪ್ಯಾಟಿ, ಹಿರಿಯ ಸಾಹಿತಿಗಳು

Related Posts

Leave a Reply

Your email address will not be published. Required fields are marked *