ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಭಾನುವಾರ ಮದ್ದೂರಿನಲ್ಲಿ ಕಲ್ಲು ತೂರಾಟ ನಡೆದು ಎರಡೂ ಕೋಮುಗಳ ಹಲವು ಯುವಕರು ಗಾಯಗೊಂಡಿದ್ದು, ಇಂದು ನಿಷೇಧಾಜ್ಞೆ ಜಾರಿಯಲ್ಲಿದೆ. ನಾಳೆ ಅಂದರೆ ಮಂಗಳವಾರ ಕೃತ್ಯ ಖಂಡಿಸಿ ಹಿಂದೂ ಮುಖಂಡರು ಮದ್ದೂರು ಬಂದ್‌ಗೆ ಕರೆ ನೀಡಿದ್ದಾರೆ.
ಮಂಗಳವಾರ ಮದ್ದೂರು ಪಟ್ಟಣ ಸ್ತಬ್ಧವಾಗಲಿದೆ. ಬುಧವಾರ ಮದ್ದೂರು ತಾಲೂಕಿನ ಎಲ್ಲಾ ಗಣೇಶ ಮೂರ್ತಿಗಳನ್ನು ಪಟ್ಟಣದಲ್ಲಿ ತಂದು ಮೆರವಣಿಗೆ ಮಾಡಿ ವಿಸರ್ಜನೆ ಮಾಡಲು ಹಿಂದೂ ಮುಖಂಡರು ತೀರ್ಮಾನಿಸಿದ್ದಾರೆ.
ಕಲ್ಲು ತೂರಾಟದ ಬಳಿಕ ಮದ್ದೂರಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೂಡಲೇ ಮಸೀದಿಯ ಧರ್ಮಗುರುವನ್ನು ಬಂಧಿಸುವಂತೆ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಸ್ಥಳದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಮಸೀದಿ ಕಡೆಯಿಂದ ಕಲ್ಲುಗಳು ಎಸೆದ ಬಗ್ಗೆ ಮಾಹಿತಿ ಇದೆ. ವಿಚಾರಣೆ ನಡೆಸಿ ನಂತರ 21 ಜನರನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಯಾವ ಹಿಂದೂಗಳ ಮೇಲೂ ಕೇಸ್ ದಾಖಲಾಗಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಚೋದಿಸುತ್ತಿದ್ದಾರೆ. ಇನ್ನಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳಲು ಹೇಳಬಹುದಿತ್ತು. ಅದು ಬಿಟ್ಟು ಕೋಮುಗಲಭೆಗೆ ಪ್ರಚೋದನೆ ಕೊಡುವುದು ಸರಿಯಲ್ಲ ಎಂದಿದ್ದಾರೆ.
ಹೊರಗಡೆಯಿಂದ ಬಂದು ಯಾರೋ ಗಲಭೆ ಮಾಡಿರಬಹುದು ಎಂಬುದನ್ನೂ ವಿಚಾರಣೆ ಮಾಡುತ್ತಿದ್ದೇವೆ. ಯಾವುದೇ ಸಮಾಜವಿದ್ದರೂ ಅವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಇದೆಲ್ಲ ಆಗುತ್ತಿದೆ. ಬಿಜೆಪಿ ನಾಯಕರೇ ಸಂಘಟನೆಗಳ ಮುಖಂಡರಿಗೆ ಕರೆ ಮಾಡಿ ಪ್ರಚೋದನೆ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕ್ರಮ ತೆಗೆದುಕೊಳ್ಳುವಲ್ಲಿ ಅಧಿಖಾರಿಗಳು ಯಾವುದೇ ಒತ್ತಡಕ್ಕೆ ಮಣಿದರೆ ಖುದ್ದಾಗಿ ನಾನೇ ಮದ್ದೂರಿಗೆ ಬರಬೇಕಾಗುತ್ತದೆ ಎಂದು ಮಂಡ್ಯ ಎಸ್ಪಿಗೆ ಕರೆ ಮಾಡಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿಸಿಗೆ ತಿಳಿಸಿದ್ದಾರೆ.
ಮದ್ದೂರು ಕಲ್ಲೆಸೆತಕ್ಕೆ ಸರ್ಕಾರದ ಕುಮ್ಮಕ್ಕಿದೆ. ಈ ಘಟನೆಗೆ ನೇರ ಕಾರಣ ಸರ್ಕಾರ. ನಾವು ಪಾಕಿಸ್ತಾನದಲ್ಲಿವೋ ಕರ್ನಾಟಕದಲ್ಲಿದ್ದೀವೋ ಎಂಬ ಭ್ರಮೆ ಮೂಡುತ್ತಿದೆ. ಇವರ ಯೋಗ್ಯತೆಗೆ ಅಲ್ಲಿ ಒಂದು ಮೀಸಲು ಪಡೆ ಇಟ್ಟಿದ್ದರೆ ಲಾಠಿ ಚಾರ್ಜ್ ಅವಶ್ಯಕತೆ ಇತ್ತಾ, ಈ ತರಹ ಗೂಂಡಾಗಳು ಮಸೀದಿಯಲ್ಲಿ ಇರುತ್ತಾರೆ ಎಂದು ಗೊತ್ತಿರಬೇಕಿತ್ತು. ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ, ನೀವು ಎರಡು ದಿನದ ಹಿಂದೆ ಹಾಡಿ ಹೊಗಳಿದ “ಶಾಂತಿದೂತರು” ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಾಗರದಲ್ಲಿ ಗಣಪತಿಯ ವಿಗ್ರಹಕ್ಕೆ ಉಗುಳುವ ಹೀನ ಕೆಲಸ ಮಾಡಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ದೊಡ್ಡ ಕೊಡುಗೆ ಕೊಟ್ಟವರು, ನೀವು ಹೊಗಳಿದ ಶಾಂತಿದೂತರು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಕಿಡಿ ಕಾರಿದ್ದಾರೆ.