ಬಾಗಲಕೋಟೆಯಲ್ಲಿ ಗುರುವಾರ ಸಂಜೆ ಶಿವಾಜಿ ಜಯಂತಿ ವೇಳೆ ನಡೆದ ಕಲ್ಲು ತೂರಾಟ, ಚಪ್ಪಲಿ ಎಸೆತಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ಗೋಯೆಲ್ ಮಾಹಿತಿ ನೀಡಿದ್ದಾರೆ.
ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆದಿದ್ದು, ಎಸ್‌ಪಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿದರು.
ನಿಷೇಧಾಜ್ಞೆಯನ್ನು ಫೆಬ್ರವರಿ 24ರವರೆಗೆ ಜಾರಿಗೊಳಿಸಿದ್ದು, ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ತರಕಾರಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾಧಾರಗಳ ಮೇಲೆ ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು. ಆರೋಪಿಗಳಲ್ಲಿ ಕೆಲವರು ಮಸೀದಿಯೊಳಗೆ ಇದ್ದರೆ, ಕೆಲವರು ಪ್ರಾರ್ಥನೆ ಮುಗಿಸಿಕೊಂಡು ಹೋಗಿದ್ದರು. ಒಬ್ಬ ಎರಡು ಕಲ್ಲನ್ನು ಎಸೆದಾಗ ಪೊಲೀಸರ ಮೇಲೆ, ಜನರ ಮೇಲೆ ಬಿದ್ದಿದೆ, ಕಲ್ಲೆಸೆದ ಯುವಕ ಕಂಜೀರ್‌ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 24ರ ಮಧ್ಯರಾತ್ರಿ ತನಕ ಬಾಗಲಕೋಟೆಯ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಜನಕ್ಕಿಂತ ಹೆಚ್ಚು ಜನರು ಸೇರುವುದು, ಆಯುಧಗಳನ್ನು ಹಿಡಿದುಕೊಂಡು ಸಂಚರಿಸುವುದು, ಪೂರ್ವಾನುಮತಿ ಇಲ್ಲದೆ ಸಭೆ, ಸಮಾರಂಭ ಅಥವಾ ಪ್ರತಿಭಟನೆ, ಧರಣಿ ಆಯೋಜಿಸುವುದನ್ನು ನಿಷೇಧಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.


