ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿದ ತೆರಿಗೆ ಯುದ್ಧದಿಂದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲಗೊಂಡಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 19 ಲಕ್ಷ ಕೋಟಿ ರೂ. ನಷ್ಟವಾಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬೃಹತ್ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಭಾರೀ ಇಳಿಕೆ ಕಂಡಿದೆ.
ಸೆನ್ಸೆಕ್ಸ್ ಆರಂಭದಲ್ಲಿ 4 ಸಾವಿರ ಅಂಕ ಪತನಗೊಂಡು ನಂತರ ಚೇತರಿಕೆ ಕಂಡಿತ್ತು. ಬೆಳಗ್ಗೆ 11 ಗಂಟೆಯಷ್ಟು ಹೊತ್ತಿಗಾಗಲೇ 2,900 ಅಂಕ ಚೇತರಿಕೆಯಾಗಿ 72,423.48 ರಲ್ಲಿ ವ್ಯವಹಾರ ನಡೆಸುತ್ತಿತ್ತು. ನಿಫ್ಟಿ 900 ಅಂಕ ಇಳಿಕೆಯಾಗಿ 21,960.80 ರಲ್ಲಿ ವ್ಯವಹಾರ ನಡೆಸುತ್ತಿದೆ. ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಕ್ಷೇತ್ರಗಳ ಷೇರುಗಳು ಮೌಲ್ಯ ಇಳಿಕೆಯಾಗಿದೆ.
ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿ ಭಾರೀ ಇಳಿಕೆಯಾಗಿತ್ತು. ಗಿಫ್ಟ್ ನಿಫ್ಟಿಯೂ ಅಂಕ ಇಳಿಕೆಯಾಗುತ್ತಿದ್ದಂತೆ ಭಾರತದಲ್ಲೂ ಪರಿಣಾಮ ಖಚಿತವಾಗಿತ್ತು. ಬೆಳಗ್ಗೆಯವರೆಗೆ 19 ಲಕ್ಷ ಕೋಟಿ ನಷ್ಟ ಸಂಭವಿಸಿದ್ದು ನಿಫ್ಟಿ ಮತ್ತು ಸೆನ್ಸೆಕ್ಸ್ ಮತ್ತಷ್ಟು ಕುಸಿದರೆ ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.
ಗಿಫ್ಟಿ ನಿಫ್ಟಿ 888, ಜಪಾನ್‌ನ ನಿಕ್ಕಿ 225 2,302 ಅಂಕ, ತೈವಾನ್‌ನ ವೈಯ್ಟೆಡ್ ಸೂಚ್ಯಂಕವೂ 2063 ಅಂಶ ಕುಸಿಯಿತು. ಹಾಂಕಾಂಗ್‌ನ ಹ್ಯಾಂಗ್‌ಸೆನ್ 2,677 ಅಂಕ ಕುಸಿದಿದೆ. ಅಮೆರಿಕ ಮಾಧ್ಯಮಗಳು ಸೋಮವಾರ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂದು ವರದಿ ಬಿತ್ತರಿಸುತ್ತಿದ್ದವು. ಅದರಂತೆ ವಿಶ್ವದ ಮಾರುಕಟ್ಟೆಯಲ್ಲಿ ಬಿರುಗಾಳಿಯೆದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ.