Menu

ಶೀಘ್ರದಲ್ಲೇ ರಾಜ್ಯಾಧ್ಯಕ್ಷರ ನೇಮಕ ಆಗಲಿದೆ: ಬಿವೈ ವಿಜಯೇಂದ್ರ

ಬೆಂಗಳೂರು: ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ದೆಹಲಿಯಿಂದ ಮರಳಿದ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ವರದಿಗಳು ಕೇವಲ ಕಪೋಲಕಲ್ಪಿತ. ರಾಜ್ಯಾಧ್ಯಕ್ಷ ನೇಮಕ ಕುರಿತ ಹೇಳಿಕೆಗಳಲ್ಲಿ ಅರ್ಧಸತ್ಯ ಮಾತ್ರವಿದೆ ಎಂದರು.

ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲರ ಅಭಿಪ್ರಾಯ ಪಡೆದಿದ್ದಾರೆ. ನಾನು ಕಳೆದ ಒಂದೂವರೆ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಕೆಲಸ- ಸಂಘಟನಾ ಕಾರ್ಯ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷ ಅಂದ ಮೇಲೆ ಸಣ್ಣಪುಟ್ಟ ಅಸಮಾಧಾನಗಳು ಇರುವುದು ಸಹಜ. ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರು, ಅಸಮಾಧಾನ ಹೊಂದಿದವರು ಪಕ್ಷದಿಂದ ಹೊರಗೆ ಇದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಇನ್ನೂ ನೇಮಕಾತಿ ಆಗುತ್ತಿಲ್ಲ; ಗೊಂದಲಗಳಿದ್ದು ಮುಂದೂಡುತ್ತಿದ್ದಾರೆ ಎಂಬುದು ಯಾವುದೂ ಸತ್ಯವಲ್ಲ. ದೇಶದ 14 ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಗಿದಿದೆ. ಕರ್ನಾಟಕ, ತೆಂಗಾಣ ಸೇರಿದಂತೆ ಕೆ ಆರೇಳು ರಾಜ್ಯಗಳ ಅಧ್ಯಕ್ಷರ ಘೋಷಣೆ ಆಗಲಿದೆ ಎಂಬ ಮಾಹಿತಿ ನಮಗೆ ಬರುತ್ತಿದೆ ಎಂದರು.

ಅದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಆಗಲಿದೆ. ಕರ್ನಾಟಕ ಒಂದೇ ಅಲ್ಲ; ಡಿ.ವಿ.ಸದಾನಂದಗೌಡರ ಹೇಳಿಕೆ ಅರ್ಧ ಸತ್ಯ. ಉತ್ತರ ಪ್ರದೇಶ ರಾಜ್ಯದ ಅಧ್ಯಕ್ಷರ ನೇಮಕಾತಿಯೂ ಆಗಿಲ್ಲ. ತೆಲಂಗಾಣ- ಕರ್ನಾಟಕ ರಾಜ್ಯಗಳ ಅಧ್ಯಕ್ಷರ ನೇಮಕಾತಿಯೂ ನಡೆದಿಲ್ಲ ಎಂದು ವಿವರಿಸಿದರು.

ಬಿಜೆಪಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಹಿರಿಯರಾದ ಡಿ.ವಿ.ಸದಾನಂದಗೌಡರ ಹೇಳಿಕೆಯ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಡಿ.ವಿ.ಸದಾನಂದಗೌಡರು ಹಿರಿಯರಿದ್ದಾರೆ. ನಾಳೆ ಭೇಟಿ ಮಾಡಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು. ಸಣ್ಣಪುಟ್ಟ ಅಭಿಪ್ರಾಯ ವ್ಯತ್ಯಾಸ ಇರುವುದು ಸಹಜ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *