ಜನಗಣತಿಯೊಂದಿಗೆ ಜಾತಿ ಗಣತಿಯನ್ನು ನಡೆಸಲು ಕೇಂದ್ರ ಸಂಪುಟ ನಿರ್ಧರಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜನಗಣತಿ ಜೊತೆಯಲ್ಲಿಯೇ ಜಾತಿ ಗಣತಿಯನ್ನೂ ನಡೆಸುವ ಮಹತ್ವದ ನಿರ್ಧಾರವನ್ನು ಮೋದಿಯವರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ. ಇದು ಐತಿಹಾಸಿಕ ಮತ್ತು ದೂರದೃಷ್ಟಿಯ ನಿರ್ಧಾರವಾಗಿದೆ. ಜಾತಿ ಗಣತಿಯು 1931ರ ನಂತರ ಇದೇ ಮೊದಲ ಬಾರಿಗೆ ಮುಂಬರುವ ರಾಷ್ಟ್ರೀಯ ಜನಗಣತಿಯ ಭಾಗವಾಗಲಿದೆ ಎಂಬುದು ಗಮನಾರ್ಹ ಎಂದಿದ್ದಾರೆ.
ಈ ಕ್ರಮದಿಂದ ಭಾರತವು ಅಧಿಕೃತ, ವೈಜ್ಞಾನಿಕ ಮತ್ತು ಪಾರದರ್ಶಕವಾದ ಜಾತಿ ದತ್ತಾಂಶ ಹೊಂದಲಿದೆ. ಕೇವಲ ರಾಜಕೀಯ ಪ್ರೇರಿತ ರಾಜ್ಯ ಮಟ್ಟದ ಸಮೀಕ್ಷೆಗಳು ವಿಶ್ವಾಸಾರ್ಹತೆ, ಏಕರೂಪತೆ ಹೊಂದಿರುವುದಿಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಸಮಗ್ರ ಆಡಳಿತ ಮತ್ತು ದತ್ತಾಂಶ ಚಾಲಿತ ನೀತಿ ನಿರೂಪಣೆ ಬಗ್ಗೆ ಹೊಂದಿರುವ ತಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಈ ಗಣತಿಯು ಕಲ್ಯಾಣ ಕಾರ್ಯಕ್ರಮ ಗಳನ್ನು ಬಲಗೊಳಿಸುತ್ತದೆ, ಸಾಮಾಜಿಕ ನ್ಯಾಯವನ್ನು ಇನ್ನಷ್ಟು ಖಚಿತಪಡಿಸುತ್ತದೆ ಹಾಗೂ ಸರ್ವರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರತಿ ಪಾದಿಸಿದ್ದಾರೆ.
ರಾಷ್ಟ್ರದ ಹಿತದೃಷ್ಟಿಯಿಂದ ಈ ನಿರ್ಣಾಯಕ ಮತ್ತು ದೂರದೃಷ್ಟಿಯ ನಿರ್ಧಾರಕ್ಕಾಗಿ ಪ್ರಧಾನಮಂತ್ರಿಯವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ನಿರ್ಧಾರವನ್ನು ನಾನು, ನಮ್ಮ ಪಕ್ಷವು ಸ್ವಾಗತಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.