ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದ್ದು, ಒಂದೆರಡು ವಾರಗಳ ಒಳಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಕನಿಷ್ಠ ವೇತನವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕನಿಷ್ಠ ವೇತನ ಸಲಹಾ ಮಂಡಳಿಗೆ ಕಳುಹಿಸಬೇಕಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಕರಡು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದಷ್ಟೇ ಪ್ರಮಾಣದಲ್ಲಿ ಕನಿಷ್ಠ ವೇತನ ಹೆಚ್ಚಳ ಮಾಡಿದರೆ ಕಾರ್ಮಿಕರಿಗೆ ದೇಶದಲ್ಲಿಯೇ ಅತಿ ಹೆಚ್ಚು ಕನಿಷ್ಠ ವೇತನ ನೀಡುವ ರಾಜ್ಯ ಎಂದು ಕರ್ನಾಟಕ ಗುರುತಿಸಿಕೊಳ್ಳಲಿದೆ. ಒಟ್ಟು 82 ನಾನಾ ಕೆಲಸಗಳಿಗೆ ಕಾರ್ಮಿಕರ ಕನಿಷ್ಠ ವೇತನ ಅನ್ವಯವಾಗಲಿದೆ. 2022 ರಲ್ಲಿ ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.
ಕರಡು ಅಧಿಸೂಚನೆಯನ್ನು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಗೆ ಕಳುಹಿಸಲಾಗುವುದು. ಮಂಡಳಿಯು ಅನುಮೋದನೆ ನೀಡಿದರೆ ಒಂದೆರಡು ವಾರಗಳಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ವೇತನ ಪರಿಷ್ಕರಣೆಯಿಂದ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕರಿಗೆ ಪ್ರಯೋಜನವಾಗಲಿದೆ.
ಪ್ರಸ್ತುತ ಕರ್ನಾಟಕದಲ್ಲಿ ಕೌಶಲ ಸಹಿತ ಮತ್ತು ಕೌಶಲರಹಿತ ಕಾರ್ಮಿಕರ ಕನಿಷ್ಠ ವೇತನ ತಿಂಗಳಿಗೆ 12,000 ಇದೆ. ಪರಿಷ್ಕೃತ ಲೆಕ್ಕಾಚಾರದ ಪ್ರಕಾರ 20,000 ರೂಪಾಯಿಗೆ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಸೇರಿದಂತೆ ವಿವಿಧ ವಲಯಗಳ 1.7 ಕೋಟಿ ಕಾರ್ಮಿಕರಿದ್ದಾರೆ.
ಕನಿಷ್ಠ ವೇತನ ಕಡಿಮೆ ಇರಬೇಕೆಂದು ಉದ್ಯೋಗದಾತರು ಬಯಸಿದ್ದು, ಎಲ್ಲರ ಹಿತಾಸಕ್ತಿಯನ್ನು ಪರಿಗಣಿಸುತ್ತೇವೆ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ. ಕನಿಷ್ಠ ವೇತನವನ್ನು ತಿಂಗಳಿಗೆ 35000 ರೂಪಾಯಿಗೆ ಹೆಚ್ಚಿಸಬೇಕೆಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ. ದೆಹಲಿಯಲ್ಲಿ ಕಾರ್ಮಿಕರ ಕನಿಷ್ಠ ವೇತನ ತಿಂಗಳಿಗೆ 17000 ರೂ.ನಿಂದ 23,000 ಸಾವಿರ ರೂಪಾಯಿವರೆಗೆ ಇದೆ.


