ಬೆಂಗಳೂರು: ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ, ರಾಜ್ಯ ಸರ್ಕಾರ 2025–26 ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 51,000 ಅತಿಥಿ ಶಿಕ್ಷಕರನ್ನು ನೇಮಿಸುವ ಆದೇಶ ನೀಡಿದೆ.
ಮೇ 29, 2025 ರಂದು ಶಾಲೆಗಳು ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆರಂಭವಾಗಲಿ ಎಂಬ ಉದ್ದೇಶ ಈ ತಾತ್ಕಾಲಿಕ ನೇಮಕಾತಿಗೆ ಆದೇಶ ಹೊರಡಿಸಿದೆ.
2025-26 ನೇ ಶೈಕ್ಷಣಿಕ ಸಾಲಿಗೆ ಖಾಲಿಯಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರುಗಳ ಹುದ್ದೆಗಳಿಗೆದುರಾಗಿ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರುಗಳನ್ನು ತಾತ್ಕಾಲಿಕವಾಗಿ ನೇರ ನೇಮಕಾತಿ ಮೂಲಕ ಶಿಕ್ಷಕರನ್ನು ಭರ್ತಿ ಮಾಡುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಎಂಬ ಷರತ್ತಿಗೊಳಪಟ್ಟು ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಸರ್ಕಾರವು ಮಂಜೂರಾತಿ ನೀಡಿ ಆದೇಶಿಸಿದೆ.
ರಾಜ್ಯ ಸರ್ಕಾರದ ಈ ತ್ವರಿತ ಕ್ರಮವು ವಿದ್ಯಾರ್ಥಿಗಳ ಶಿಕ್ಷಣ ನಿರಂತರವಾಗಿರಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
51,000 ಅತಿಥಿ ಶಿಕ್ಷಕರ ಪೈಕಿ 40,000ರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಾಗೂ ಉಳಿದ 11,000ರನ್ನು ಸರ್ಕಾರಿ ಪ್ರೌಢ ಶಾಲೆಗಳಿಗೆ ನೇಮಿಸಿ ಆದೇಶಿಸಿದೆ.
ವಿದ್ಯಾರ್ಥಿಗಳು ಶಿಕ್ಷಕರ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಮುಖ್ಯ ಗುರಿ. ಈ ತ್ವರಿತ ನಿರ್ಧಾರ ಶೈಕ್ಷಣಿಕ ಕೊರತೆಯನ್ನು ಪೂರೈಸಲು ಅಗತ್ಯವಾಗಿದೆ. ಹೊಸ ಶೈಕ್ಷಣಿಕ ವರ್ಷ ಆರಂಭದ ದಿನದಿಂದಲೇ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗುವುದು ನಮ್ಮ ಆದ್ಯತೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಅತಿಥಿ ಶಿಕ್ಷಕರಿಗೆ ನೀಡಲಾಗುವ ಗೌರವಧನದ ಪಾವತಿಗಾಗಿ ಅವಶ್ಯವಿರುವ ಅನುದಾನದ ವಿವರ ಹಾಗೂ ಅಥಿತಿ ಶಿಕ್ಷಕರ ಜಿಲ್ಲಾ, ತಾಲ್ಲೂಕುವಾರು ವಿವರಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದೆ.