ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಹಾಗೂ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ಅಗಲಿಕೆ ಸಾಹಿತ್ಯ ಜಗತ್ತಿಗೆ ಅಳಿಸಲಾಗದ ನಷ್ಟ. 94ರ ಹರೆಯದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಭೈರಪ್ಪನವರ ಅಂತ್ಯಕ್ರಿಯೆ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದ್ದು, ನಾಳೆ (ಸೆ.25) ಬೆಳಿಗ್ಗೆ 8 ಗಂಟೆಯಿಂದ ಭೈರಪ್ಪನವರ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ಲಭ್ಯವಾಗಲಿದೆ.
ಮೊದಲು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮೈಸೂರಿಗೆ ಕೊಂಡೊಯ್ದು ಸಂಜೆ ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ಕಲಾಮಂದಿರದಲ್ಲಿ ಲಕ್ಷಾಂತರ ಅಭಿಮಾನಿಗಳು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ರಾಜಕೀಯ-ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಅಂತಿಮ ನಮನ ಸಲ್ಲಿಸಲಿದ್ದಾರೆ. ನಾಡಿದ್ದು ಶುಕ್ರವಾರ ಬೆಳಗ್ಗೆ ಅವರ ಕುಟುಂಬಸ್ಥರು ಅಂತ್ಯಕ್ರಿಯೆಯನ್ನು ನೆರವೇರಿಸಲಿದ್ದಾರೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್.ಎಲ್ ಭೈರಪ್ಪ ಅಂತ್ಯಕ್ರಿಯೆ
ರಾಜ್ಯ ಸರ್ಕಾರ ಎಸ್ಎಲ್ ಭೈರಪ್ಪ ಅವರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವುದಾಗಿ ಆದೇಶ ಹೊರಡಿಸಿದೆ.
“ಹಿರಿಯ ಸಾಹಿತಿಗಳು ಹಾಗೂ ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರು ನಿಧನರಾದ ವಿಷಯವನ್ನು ರಾಜ್ಯ ಸರ್ಕಾರವು ತೀವ್ರ ಸಂತಾಪದಿಂದ ಪ್ರಕಟಿಸುತ್ತದೆ. ಮೃತರ ಗೌರವಾರ್ಥವಾಗಿ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ,” ಎಂದು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಟಾಚಾರ) ಅಧಿಕೃತ ಆದೇಶ ಹೊರಡಿಸಿದೆ.
ಎಸ್‌ಎಲ್ ಭೈರಪ್ಪ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಸೇರಿದಂತೆ ಪ್ರಮುಖ ಗಣ್ಯರು ಸಂತಾಪ ಸೂಚಿಸಿದ್ದಾರೆ.