ಶಾಸಕರಿಗೆ ಮಾತ್ರ ಅನ್ವಯವಾಗುವಂತೆ 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಎರಡು ವರ್ಷಗಳ ಅವಧಿಗೆ 2024ರ ಜ.26ರಂದು ನಿಗಮ ಮಂಡಳಿ ಅಧ್ಯಕ್ಷರನ್ನು ರಾಜ್ಯ ಸರ್ಕಾರ ನೇಮಿಸಿತ್ತು. ಜನವರಿ 26ಕ್ಕೆ ಇವರ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.
ಅಧಿಕಾರಾವಧಿ ವಿಸ್ತರಣೆ ಮಾಡಿರುವ ರಾಜ್ಯ ಸರ್ಕಾರ ಮುಂದಿನ ಆದೇಶದವರೆಗೂ 25 ಶಾಸಕರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನ ಕೂಡ ಮುಂದುವರಿಸಲು ಆದೇಶಿಸಿದೆ.
ಶಾಸಕರಾದ ಶರತ್ ಬಚ್ಚೇಗೌಡ, ಶಿವಲಿಂಗೇಗೌಡ, ಪುಟ್ಟರಂಗಶೆಟ್ಟಿ, ಹೆಚ್ಸಿ ಬಾಲಕೃಷ್ಣ, ಎಸ್ಆರ್ ಶ್ರೀನಿವಾಸ್, ಎನ್ಎ ಹ್ಯಾರೀಸ್, ಬಿಕೆ ಸಂಗಮೇಶ್, ಅಬ್ಬಯ್ಯ ಪ್ರಸಾದ್, ಬೇಳೂರು ಗೋಪಾಲಕೃಷ್ಣ ಸೇರಿದಂತೆ 25 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿ ಮುಂದುವರಿಯುವ ಭಾಗ್ಯ ಸಿಕ್ಕಿದೆ.
ರಾಜ್ಯಪಾಲರ ನಡೆ ಬಗ್ಗೆ ಚರ್ಚೆಗೆ ಸ್ಪೀಕರ್ ಕಡಿವಾಣ
ವಿಧಾನಸಭೆಯಲ್ಲಿ ರಾಜ್ಯಪಾಲರ (Governor) ನಡಾವಳಿ ಬಗ್ಗೆ ಯಾರೂ ಮಾತನಾಡಬಾರದು, ಆಗಿರುವ ಘಟನೆಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸ್ಪೀಕರ್ ಯು.ಟಿ ಖಾದರ್ ರೂಲಿಂಗ್ ನೀಡಿದ್ದಾರೆ.
ಜಂಟಿ ಅಧಿವೇಶನದಂದು ರಾಜ್ಯಪಾಲರ ನಡೆ ಚರ್ಚೆಗೆ ರಾಜ್ಯಪಾಲರ ವಿರುದ್ಧ ನಡೆದುಕೊಂಡವರ ಸಸ್ಪೆಂಡ್ಗೆ ಆಗ್ರಹಿಸಿದ್ದ ಬಗ್ಗೆ ಸ್ಪೀಕರ್ ರೂಲಿಂಗ್ ಕೊಟ್ಟರು. ಅಲ್ಲದೇ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕೈಗೊಳ್ಳಬೇಕೋ ಅಥವಾ ಖಂಡನಾ ನಿರ್ಣಯ ಕೈಗೊಳ್ಳಬೇಕೋ ಎಂಬ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಸ್ಪೀಕರ್ ಈ ತೀರ್ಮಾನ ಕೈಗೊಂಡಿದ್ದಾರೆ.
ಜನವರಿ 22 ರಂದು ಉಭಯ ಸದನದ ಬಗ್ಗೆ ಉದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲಿ ನಡೆದ ಘಟನಾವಳಿಗಳು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆ ಆಗಿದೆ. ಈ ಸದನದ ಸದಸ್ಯರಾಗಿರುವ ನಮ್ಮ ನಡೆತೆ ಹಾಗೂ ಅಭಿಪ್ರಾಯಗಳು ಸದಾಬಿರುಚಿ ಮತ್ತು ಸಂವಿಧಾನ ಬದ್ದವಾಗಿರಬೇಕು. ಸದಸ್ಯರು ಹಾಗೂ ಸದನದ ಗೌರವ ಎತ್ತಿ ಹಿಡಿಯಬೇಕು ಅಂತ ಹೇಳಿದ್ದಾರೆ.
ಇನ್ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಇದನ್ನ ಇಲ್ಲಿಗೇ ನಿಲ್ಲಿಸಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಮುಂದುವರಿಸಬೇಕು. ಇನ್ನು ಮುಂದೆ ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚೆ ಮಾಡಬಾರದು ಅಂತಾ ಸ್ಪೀಕರ್ ರೂಲಿಂಗ್ ನೀಡಿದರು.


