ಬೆಂಗಳೂರು: 2025-26ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹೆಚ್ಚುವರಿ ಕಬ್ಬು ಬೆಲೆ ನಿಗದಿಪಡಿಸಿ ರಾಜ್ಯ ಸರ್ಕಾರ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಪ್ರತಿನಿಧಿಗಳ ಜೊತೆಗಿನ ಸಭೆಯಲ್ಲಿ ತೀರ್ಮಾನವಾದಂತೆ ಆದೇಶ ಹೊರಬಿದ್ದಿದ್ದು, ಕಬ್ಬು ಖರೀದಿ ಮಾಡಿದ ಹಣವನ್ನು 14 ದಿನದಲ್ಲಿ ರೈತರಿಗೆ ಪಾವತಿಸುವಂತೆ ಸೂಚಿಸಿದೆ.
2025-26ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಕ ಹೆಚ್ಚುವರಿ ಕಬ್ಬು ಬೆಲೆಯನ್ನು ನಿಗದಿಪಡಿಸಲು ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವನ್ನು ಒಂದು ಬಾರಿಯ ಕ್ರಮವಾಗಿ ನಿಗದಿಪಡಿಸಿ ಸರ್ಕಾರ ಆದೇಶಿಸಿದೆ.
ಆದೇಶದ ವಿವರ:
ಆದೇಶದಂತೆ 9.5% ಅಥವಾ ಕಡಿಮೆ ರಿಕವರಿ ದರ ಕಬ್ಬಿಗೆ ಪ್ರತಿ ಟನ್ಗೆ ಕಾರ್ಖಾನೆಗಳು ಕೇಂದ್ರ ಸರ್ಕಾರದ ಎಫ್ಆರ್ಪಿ ದರದ ಅನ್ವಯ ರೈತರಿಗೆ ನೀಡಲು ಒಪ್ಪಿರುವ ಮೊತ್ತದ ಮೇಲೆ ಸಕ್ಕರೆ ಕಾರ್ಖಾನೆ ವತಿಯಿಂದ 50 ರೂ. ಮತ್ತು ರಾಜ್ಯ ಸರ್ಕಾರದ ವತಿಯಿಂದ 50 ರೂ. ಸೇರಿ ಹೆಚ್ಚುವರಿ 100 ರೂ. ನೀಡಲಾಗುವುದು.
ಅದೇ ರೀತಿ 10.25% ರಿಕವರಿ ದರಕ್ಕೆ ಕಾರ್ಖಾನೆಗಳು ರೈತರಿಗೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ 3,100 ರೂ. ನೀಡಲು ಒಪ್ಪಿದೆ. ಅದರ ಮೇಲೆ ಹೆಚ್ಚುವರಿ 100 ರೂ. ಸೇರಿಸಿ ಪ್ರತಿ ಟನ್ 3,200 ರೂ. ನಿಗದಿಪಡಿಸಿ ಆದೇಶಿಸಲಾಗಿದೆ.
11.25% ರಿಕವರಿ ದರಕ್ಕೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತು ಪಡಿಸಿ ಪ್ರತಿ ಟನ್ ಕಬ್ಬಿಗೆ 3,200 ರೂ. ನೀಡಲು ಸರ್ಕಾರ ಒಪ್ಪಿದೆ. ಅದರ ಮೇಲೆ ಹೆಚ್ಚುವರಿ 100 ರೂ. ಸೇರಿಸಿ ಪ್ರತಿ ಟನ್ಗೆ 3,300 ರೂ. ನಿಗದಿಗೊಳಿಸಿ ಆದೇಶಿಸಲಾಗಿದೆ.
14 ದಿನಗಳಲ್ಲಿ ಸಂದಾಯ:
10.25 – 9.5% ಸಕ್ಕರೆ ಇಳುವರಿ ಪ್ರಮಾಣ ನಡುವೆ ಪ್ರತಿ 0.1% ಕಡಿಮೆ ಸಕ್ಕರೆ ಇಳುವರಿಗೆ ಅನುಪಾತಕ್ಕೆ ಅನುಗುಣವಾಗಿ 3.46 ರೂ. ಮೊತ್ತವನ್ನು ಪ್ರತಿ ಕ್ವಿಂಟಾಲ್‌ಗೆ ಪರಿಗಣಿಸುವುದು. 11.25 – 10.25% ಸಕ್ಕರೆ ಇಳುವರಿ ಪ್ರಮಾಣದ ನಡುವೆ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ, ಪ್ರತಿ 0.1% ಕಡಿಮೆ ಸಕ್ಕರೆ ಇಳುವರಿಗೆ ಅನುಪಾತಕ್ಕೆ ಅನುಗುಣವಾಗಿ 1 ರೂ. ಮೊತ್ತವನ್ನು ಪ್ರತಿ ಕ್ವಿಂಟಾಲ್‌ಗೆ ಪರಿಗಣಿಸುವಂತೆ ಆದೇಶಿಸಲಾಗಿದೆ.
ಕಾರ್ಖಾನೆಗಳು ಪ್ರಥಮ ಕಂತಿನ ಮೊತ್ತವನ್ನು ಸಕ್ಕರೆ ನಿಯಂತ್ರಣ ಕಾಯ್ದೆಯಡಿಯಲ್ಲಿ ನಿಗದಿಪಡಿಸಿರುವಂತೆ 14 ದಿನಗಳಲ್ಲಿ ಹಣವನ್ನು ರೈತರಿಗೆ ಸಂದಾಯ ಮಾಡುವಂತೆ ಸೂಚಿಸಲಾಗಿದೆ


