Menu

ಬಜೆಟ್ ನಲ್ಲಿ ಕನಿಷ್ಠ ಶೇ.4.71 ಪಾಲು ಕೊಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Siddaramaiah

ಬೆಂಗಳೂರು: ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ 4.5 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿಗಳಷ್ಟು ಆದಾಯ ಬರುತ್ತಿದೆ. ಆದರೆ ರಾಜ್ಯದ ಪಾಲನ್ನು ಈ ಬಾರಿಯ ಬಜೆಟ್ ನಲ್ಲಿ ಶೇ 4.71ಕ್ಕಿಂತ ಅಧಿಕ ಪಾಲು ನೀಡಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಹಣಕಾಸು ಆಯೋಗದ ಮುಂದೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುದೀರ್ಘ ಪತ್ರ ಬರೆದಿದೆ. ಈ ಪತ್ರವನ್ನು ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಕರ್ನಾಟಕದ ಸಮಸ್ತ ಜನತೆಯ ಪರವಾಗಿ ರಾಜ್ಯ ಸರ್ಕಾರವು 16ನೇ ಹಣಕಾಸು ಆಯೋಗದ ಮುಂದೆ ಕೆಲವು ನ್ಯಾಯ ಸಮ್ಮತ ಮತ್ತು ಸಂವಿಧಾನಾತ್ಮಕ ಬೇಡಿಕೆಗಳನ್ನು ಮಂಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನ್ಯಾಯಯುತ ತೆರಿಗೆ ಪಾಲು, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ, ವಿಶೇಷ ಅನುದಾನ ನೀಡುವುದು ಸೇರಿದಂತೆ ಸಮಾನ ಹಂಚಿಕೆಯ ಮೂಲಕ ಸದೃಢ ಒಕ್ಕೂಟಕ್ಕೆ ಮನ್ನಣೆ ನೀಡಬೇಕು ಎನ್ನುವುದು ಕರ್ನಾಟಕದ ಒತ್ತಾಯವಾಗಿದೆ.

14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ವರದಿಯಿಂದಾಗಿ ಶೇ 23ರಷ್ಟು ತೆರಿಗೆ ಪಾಲು ಕಡಿಮೆ ಆಗಿದೆ. 14ನೇ ಹಣಕಾಸು ಆಯೋಗವು ಶೇ 4.71ರಷ್ಟು ಪಾಲನ್ನು ನಮಗೆ ಒದಗಿಸಿತ್ತು. 15ನೇ ಹಣಕಾಸು ಆಯೋಗವು ಇದನ್ನು ಶೇ 3.64ಕ್ಕೆ ಇಳಿಸುವ ಮೂಲಕ ಘೋರ ಅನ್ಯಾಯ ಮಾಡಿತು. ಉದಾಹರಣೆಗೆ, ರಾಜ್ಯಗಳಿಗೆ ಹಂಚಿಕೆ ಮಾಡುವ ₹100ರಲ್ಲಿ ಮೊದಲು ಕರ್ನಾಟಕಕ್ಕೆ ₹4.71 ಸಿಗುತ್ತಿದ್ದರೆ 15ನೇ ಆಯೋಗವು ಅದನ್ನು ₹3.64 ಇಳಿಸಿತು. ಇದರಿಂದ ರಾಜ್ಯಕ್ಕೆ ನೇರವಾಗಿ ಸುಮಾರು ₹80 ಸಾವಿರ ಕೋಟಿ ತೆರಿಗೆ ಪಾಲು ಸಿಗದೇ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರವು ಕರ್ನಾಟಕದಿಂದ ₹4.5 ಲಕ್ಷ ಕೋಟಿಯಿಂದ ₹5 ಲಕ್ಷ ಕೋಟಿಗಳಷ್ಟು ಸಂಗ್ರಹಿಸುತ್ತದೆ. ರಾಜ್ಯದ ಒಟ್ಟಾರೆ ಆಯವ್ಯಯದಲ್ಲಿ ಇಡೀ ದೇಶದಲ್ಲಿಯೇ ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು ಮತ್ತು ಅನುದಾನ ಪಡೆಯುವ ರಾಜ್ಯವೂ ಕರ್ನಾಟಕವೇ ಆಗಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ನಮಗೆ 14ನೇ ಹಣಕಾಸು ಆಯೋಗವು ನೀಡಿದ್ದ ಶೇ 4.71ರಷ್ಟು ಪಾಲನ್ನು ಕೊಟ್ಟರೆ ಮಾತ್ರ ನಾವು ನಿಟ್ಟುಸಿರು ಬಿಡುವಂತಾಗುತ್ತದೆ. ಅದಕ್ಕಿಂತ ಹೆಚ್ಚು ಕೊಟ್ಟರೆ ಮಾತ್ರ ನೈಜವಾಗಿ ನ್ಯಾಯ ಸಿಕ್ಕಂತಾಗುತ್ತದೆ.

ರಾಜ್ಯಕ್ಕೆ 15ನೇ ಹಣಕಾಸು ಆಯೋಗದಲ್ಲಿ ಸಮಸ್ಯೆಯಾಗಲು ಆಯೋಗವು ಅಳವಡಿಸಿಕೊಂಡ ಸೂತ್ರಗಳಲ್ಲಿಯೇ ದೋಷಗಳಿದ್ದವು. ಆದಾಯ ದೂರ ಅಥವಾ ಇನ್‌ಕಂ ಡಿಸ್ಟೆನ್ಸ್‌ ಎಂಬ ಸೂತ್ರಕ್ಕೆ ಶೇ 45ರಷ್ಟು ಪ್ರಾಮುಖ್ಯ (ವೈಟೇಜ್‌) ನೀಡಿದ್ದು ಇದರಿಂದ ಜನರ ತಲಾ ಆದಾಯ ಹೆಚ್ಚಿದೆಯೆಂದು ನಮ್ಮ ಪಾಲನ್ನು ಕಡಿಮೆ ಮಾಡಲಾಗಿದೆ.

ಪ್ರಕೃತಿ ವಿಕೋಪ ಪರಿಹಾರದಲ್ಲಿ ವಂಚನೆ

ಪ್ರಕೃತಿ ವಿಕೋಪಗಳನ್ನು ನಿಭಾಯಿಸಲು ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್ ಅನುದಾನಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ಲೆಕ್ಕ ಹಾಕಿ ಹಂಚಿಕೆ ಮಾಡಬೇಕು. 2018-24ರ ಅವಧಿಯಲ್ಲಿ ರಾಜ್ಯವು ಪ್ರಕೃತಿ ವಿಕೋಪಗಳಿಂದಾಗಿ ₹1.56 ಲಕ್ಷ ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ. 2002ರಿಂದಲೂ ಅತಿವೃಷ್ಟಿ, ಬರ, ಪ್ರವಾಹಗಳಿಗೆ ರಾಜ್ಯವು ನಿರಂತರವಾಗಿ ಒಳಗಾಗುತ್ತಲೇ ಇದೆ. ಇಷ್ಟಿದ್ದರೂ ನಮಗೆ ಕೇವಲ 5 ರಿಸ್ಕ್‌ ಫ್ಯಾಕ್ಟರ್‌ ಅಂಕ ನೀಡುವ ಮೂಲಕ ವಂಚಿಸಲಾಗಿದೆ. ಇದನ್ನು 15ಕ್ಕೆ ಏರಿಸಬೇಕು.

ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕಕ್ಕೆ 5 ವರ್ಷಗಳಲ್ಲಿ ₹25 ಸಾವಿರ ಕೋಟಿಗಳನ್ನು ಮೀಸಲಿರಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವೂ ಅಷ್ಟೇ ಮೊತ್ತವನ್ನು ಮ್ಯಾಚಿಂಗ್‌ ಗ್ರ್ಯಾಂಟ್‌ ನೀಡಬೇಕು ಹಾಗೂ ಆ ಭಾಗದ ಪರಿಸರ ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ ₹10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ನೀಡಬೇಕು.

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ₹1.15 ಲಕ್ಷ ಕೋಟಿಗಳಷ್ಟು ಹೂಡಿಕೆ ಅಗತ್ಯವಿದೆ. ಇದಕ್ಕಾಗಿ 16ನೇ ಹಣಕಾಸು ಆಯೋಗವು ಕನಿಷ್ಠ ₹27,793 ಕೋಟಿಗಳನ್ನಾದರೂ ನೀಡುವಂತೆ ಶಿಫಾರಸು ಮಾಡಬೇಕು.‌

Related Posts

Leave a Reply

Your email address will not be published. Required fields are marked *