Wednesday, January 21, 2026
Menu

ರಾಜ್ಯ, ಕೇಂದ್ರ ಸರ್ಕಾರಗಳು ನೈಜ ಕೃಷಿಗೆ ಒತ್ತು ನೀಡಬೇಕು: ಸಚಿವ ಚಲುವರಾಯಸ್ವಾಮಿ

chaluvanarayanaswamy

ಬೆಂಗಳೂರು: ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೈಜ ಕೃಷಿಗೆ ಒತ್ತು ನೀಡಿ, ಇವರಿಂದ ಬಂದ ಪ್ರಾಥಮಿಕ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಒದಗಿಸಿದಲ್ಲಿ ನೈಜ ಕೃಷಿ ಕಾರ್ಯಕ್ರಮ ಯಶ್ವಸಿಯಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜೀವನೋಪಾಯ ಮತ್ತು ಉದ್ಯಮಶೀಲತೆ ಇಲಾಖೆ ಜಂಟಿಯಾಗಿ ” ನೈಸರ್ಗಿಕ ಕೃಷಿ” ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ,  ರಾಜ್ಯ ಸರ್ಕಾರದ ಕೃಷಿ ಇಲಾಖೆಯು ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲೂಕೆಂದೂ ಘೋಷಿಸಿದ್ದು,2025- 2026 ನೇ ಸಾಲಿನ ಆಯವ್ಯಯದಲ್ಲಿ 1 ಕೋಟಿ ಅನುದಾನ ಒದಗಿಸಿ ನೈಜ ಕೃಷಿ ಮಾಡುವ ರೈತರಿಗೆ ರಿಯಾಯಿತಿ ದರದಲ್ಲಿ ಪರಿಕರ ಒದಗಿಸಲಾಗುವುದು ಹಾಗೂ ಕೃಷಿ ಪರಿಕರ ಮಾರಾಟಗಾರರು ರಸಾಯನಿಕ ಪರಿಕರಿಗಳ ಬದಲಾಗಿ ಸಾವಯವ ಪರಿಕರಗಳನ್ನು ಮಾರಾಟ ಮಾಡಿದಲ್ಲಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ 990 ಕ್ಲಸ್ಟರ್ ಗಳನ್ನು ಗುರುತಿಸಿ ನೈಜ ಕೃಷಿ ಕಾರ್ಯಕ್ರಮವನ್ನು ಅಳವಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ, ಹಾಗೂ ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ನೈಜ ಕೃಷಿ ಪ್ರಾತ್ಯಕ್ಷಿಕೆಯನ್ನು ಕೂಡ ಅನುಷ್ಠಾನ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಪ್ರಸ್ತುತ ನೈಜ ಕೃಷಿಯನ್ನು ಪ್ರೋತ್ಸಾಹಿಸಲು ಹಾಗೂ ನೈಜ ಕೃಷಿಯನ್ನು ರೈತರು ಅಳವಡಿಸಿಕೊಳ್ಳುವಂತೆ ಮಾಡಲು ಸಾವಯವ ಕ್ಷೇತ್ರಗಳ ಪ್ರಮಾಣಿಕರಣ ಮಾಡುವುದು, ಉತ್ಕೃಷ್ಟ ಬೆಲೆ ನೀಡುವುದು ಹಾಗೂ ಮಾರುಕಟ್ಟೆಯೊಂದಿಗೆ ಜೋಡಿಸುವಲ್ಲಿ ಸೂಕ್ತ ಕ್ರಮ ಕೈಗೊಂಡಲ್ಲಿ ನೈಜ ಕೃಷಿ ಕಾರ್ಯಕ್ರಮವು ಯಶ್ವಸಿಯಾಗಿ, ರೈತರ ಆದಾಯ ಹೆಚ್ಚಿಸುವುದಲ್ಲದೇ ಪರಿಸರ ಸಂರಕ್ಷಣೆ ಸಹ ಆಗುವುದು ಎಂದು ಸಚಿವರು ಅಭಿಪ್ರಾಯವ್ಯಕ್ತಪಡಿಸಿದರು.

ಈ ಯೋಜನೆಯಡಿ ರಾಜ್ಯದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು, ನೈಸರ್ಗಿಕ ಕೃಷಿ ವಿಧಾನಗಳನ್ನು ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ತರಭೇತಿ ನೀಡಿ, ಕೃಷಿ ಚಟುವಟಿಕೆಗಳಲ್ಲಿ ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಗಳಾಗಲು ರಾಜ್ಯಾದ್ಯಂತ ” ಕೃಷಿ ಸಖಿ”ಯರನ್ನು ನೇಮಿಸಿಕೊಳ್ಳಲಾಗಿದೆ. ಇವರು ಸಂಜೀವಿನಿ ಯೋಜನೆಯಡಿ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ತರಭೇತಿ ಪಡೆದು ಗ್ರಾಮೀಣ ಮಹಿಳೆಯರಿಗೆ ಕೃಷಿ ತರಬೇತಿ, ಕೃಷಿ ಕ್ಷೇತ್ರ ಪಾಠಶಾಲೆಗಳನ್ನು ಆಯೋಜಿಸಿ, ರೈತ ಹಾಗೂ ರೈತ ಮಹಿಳೆಯರಿಗೆ ಸೂಕ್ತ ಸಲಹೆಗಳನ್ನು ನೀಡಿ ಅವರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡುತ್ತಿದ್ದಾರೆ ಎಂದು ಚಲುವರಾಯಸ್ವಾಮಿಯವರು ತಿಳಿಸಿದರು.

ಇನ್ನೂ ಇದೇ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರ ಪ್ರಾಬಲ್ಯ ಹೆಚ್ಚಿದೆ. ನೈಸರ್ಗಿಕ ಕೃಷಿ ಪದ್ಧತಿಯಲ್ಲಿಯೂ ಯಶಸ್ಸು ಕಾಣುತ್ತಿದ್ದಾರೆ. ಕರ್ನಾಟಕದಲ್ಲಿ, ಮಹಿಳೆಯರು ಈ ರೂಪಾಂತರದ ಕೇಂದ್ರದಲ್ಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ ಮೂಲಕ, ಮಹಿಳಾ ಸ್ವಸಹಾಯ ಗುಂಪುಗಳು ರಾಸಾಯನಿಕ-ಮುಕ್ತ, ಕಡಿಮೆ-ವೆಚ್ಚದ ನೈಸರ್ಗಿಕ ಕೃಷಿಯನ್ನು ಅಭ್ಯಾಸ ಮಾಡುತ್ತಿವೆ, ಕೃಷಿ ಸಖಿಗಳು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿವೆ ಮತ್ತು ಜೈವಿಕ-ಇನ್‌ಪುಟ್ ಉತ್ಪಾದನೆ ಮತ್ತು ಮೌಲ್ಯವರ್ಧನೆಯಲ್ಲಿ ಪ್ರಮುಖ ಉದ್ಯಮಗಳನ್ನು ನಡೆಸುತ್ತಿವೆ. ಇದು ಗಮನಾರ್ಹ ವಿಷಯ ಎಂದು ಡಾ. ಪಾಟೀಲ್‌ ವಿವರಿಸಿದರು.

ನೈಸರ್ಗಿಕ ಕೃಷಿ ಪದ್ಧತಿಗಳು ಮಹಿಳೆಯರಿಗೆ ಕೌಶಲ್ಯಪೂರ್ಣ ಮತ್ತು ಗೌರವಾನ್ವಿತ ಗ್ರಾಮೀಣ ಉದ್ಯೋಗವನ್ನು ಸೃಷ್ಟಿಸಿವೆ. ಸುಮಾರು 5.26 ಲಕ್ಷ ಸ್ವಸಹಾಯ ಸಂಘದ ಸದಸ್ಯರು ಮಣ್ಣಿನ ಆರೋಗ್ಯ ನಿರ್ವಹಣೆ, ಹವಾಮಾನ-ಸ್ಥಿತಿಸ್ಥಾಪಕ ಬೆಳೆ ಪದ್ಧತಿಗಳು, ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳಲ್ಲಿ ಕೌಶಲ್ಯ ಹೊಂದುತ್ತಿದ್ದಾರೆ ಎಂದು ಡಾ. ಪಾಟೀಲ್‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ಸ್ವಾತಿ ಶರ್ಮಾ, ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಅಭಿಯಾನದ ನಿರ್ದೇಶಕಿ ಆರ್. ಸ್ನೇಹಲ್ ಮತ್ತು ಹೆಚ್ಚುವರಿ ಅಭಿಯಾನ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *