ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 9 ಮಂದಿ ಮೃತಪಟ್ಟ ಘಟನೆ ಕುರಿತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 9 ಪ್ರಶ್ನೆಗಳನ್ನು ಕೇಳಿದೆ.
ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಗೆ ಉತ್ತರ ನೀಡಿರುವ ರಾಜ್ಯ ಸರಕಾರ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಅಲ್ಲದೇ ಕಬ್ಬನ್ ಪಾರ್ಕ್ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇನ್ನು ಹಲವರ ಬಂಧನಕ್ಕೆ ಮುಂದಾಗಿದೆ ಎಂದು ಉತ್ತರ ನೀಡಿದೆ.
ಸಂಭ್ರಮಾಚರಣೆ ವೇಳೆ ರಾಜ್ಯ ಸರ್ಕಾರ ನೀತಿ ಸಂಹಿತೆಯನ್ನು ಪಾಲಿಸುವಾಗ ಕೆಲವೊಂದು ಲೋಪದೋಷಗಳಾಗಿವೆ ಎಂದು ಸರ್ಕಾರದ ಪರ ವಕೀಲ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಒಪ್ಪಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ವರದಿಯನ್ನು ಕೇಳಿರುವ ಹೈಕೋರ್ಟ್ ದುರಂತಕ್ಕೆ ಸಂಬಂಧಿಸಿ ಹಲವು ಮಹತ್ವದ ಲೋಪಗಳನ್ನು ಗಮನಿಸಿದ್ದು, 9 ಪ್ರಶ್ನೆಗಳನ್ನು ಕೇಳಿದೆ.
9 ಪ್ರಶ್ನೆಗಳು
1 ವಿಜಯೋತ್ಸವ ಆಚರಿಸಲು ಯಾರು ನಿರ್ಧರಿಸಿದರು ಮತ್ತು ಯಾವ ರೀತಿಯಲ್ಲಿ?
2 ಸಂಚಾರವನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?
3 ಸಾರ್ವಜನಿಕರನ್ನು/ಜನಸಂದಣಿಯನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?
4 ಸ್ಥಳದಲ್ಲಿ ಯಾವ ವೈದ್ಯಕೀಯ ಮತ್ತು ಇತರ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ?
5 ಆಚರಣೆಯ ಸಮಯದಲ್ಲಿ ಎಷ್ಟು ಜನರು ಇರಬಹುದೆಂಬುದರ ಬಗ್ಗೆ ಮುಂಚಿತವಾಗಿ ಯಾವುದೇ ಮೌಲ್ಯಮಾಪನ ಮಾಡಲಾಗಿದೆಯೇ?
6 ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆಯೇ? ಇಲ್ಲದಿದ್ದರೆ, ಏಕೆ?
7 ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಎಷ್ಟು ಸಮಯ ತೆಗೆದುಕೊಳ್ಳಲಾಗಿದೆ?
8 ಈ ರೀತಿಯ ಯಾವುದೇ ಕ್ರೀಡಾಕೂಟ ಅಥವಾ ಆಚರಣೆಯಲ್ಲಿ 50,000 ಮತ್ತು ಅದಕ್ಕಿಂತ ಹೆಚ್ಚಿನ ಜನಸಂದಣಿಯನ್ನು ನಿರ್ವಹಿಸಲು ಯಾವುದೇ SOP (ಪ್ರಮಾಣಿತ ಕಾರ್ಯಾಚರಣಾ ವಿಧಾನ) ರೂಪಿಸಲಾಗಿದೆಯೇ?
9 ಕಾರ್ಯಕ್ರಮವನ್ನು ಆಯೋಜಿಸಲು ಯಾವುದೇ ಅನುಮತಿಯನ್ನು ಕೋರಲಾಗಿದೆಯೇ?