ಎಟಿಎಂಗೆ ತುಂಬಲು ನೀಡಿದ್ದ ಒಂದು ಕೋಟಿಗೂ ರೂಪಾಯಿಗೂ ಹೆಚ್ಚಿನ ಹಣವನ್ನು ಖಾಸಗಿ ನಗದು ನಿರ್ವಹಣಾ ಸಂಸ್ಥೆ ಹಿಟಾಚಿ ಕಂಪನಿಯ ಸಿಬ್ಬಂದಿ ತೆಗೆದುಕೊಂಡು ಹೋಗಿ ಪರಾರಿಯಾಗಿದ್ದಾರೆ.
ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಹಿಟಾಚಿ ಪೇಮೆಂಟ್ ಸರ್ವೀಸ್ ಸಂಸ್ಥೆಯು ಎಸ್‌ಬಿಐ ಮತ್ತು ಆ್ಯಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಹಣ ಜಮಾ ಮಾಡುವ ಕೆಲಸ ನಿರ್ವಹಿಸುತ್ತಿದೆ. ಕೋರಮಂಗಲದ ಬ್ಯಾಂಕ್‌ಗಳಿಂದ ನಗದು ಪಡೆದು ಎಟಿಎಂಗಳಿಗೆ ತುಂಬುವ ಜವಾಬ್ದಾರಿಯನ್ನು ಎರಡು ಪ್ರತ್ಯೇಕ ತಂಡಗಳಿಗೆ ವಹಿಸಲಾಗಿತ್ತು. ಈ ತಂಡಗಳು ಎಟಿಎಂಗಳಿಗೆ ಹಣ ಹಾಕುವ ಬದಲು ಹಣದೊಂದಿಗೆ ಪರಾರಿಯಾಗಿವೆ.
ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರವೀಣ್, ಹರೀಶ್ ಕುಮಾರ್,ರಾಮಕ್ಕ, ಧನಶೇಖರ್ ಮೊದಲ ತಂಡದಲ್ಲಿದ್ದರು. ತಂಡವು 57 ಲಕ್ಷ ರೂಪಾಯಿ ದೋಚಿದೆ. ಎರಡನೇ ತಂಡದಲ್ಲಿ ವರುಣ್, ಪ್ರವೀಣ್ ಕುಮಾರ್ ಹಾಗೂ ಹರೀಶ್ ಕುಮಾರ್ ಇದ್ದರು. ತಂಡವು 80 ಲಕ್ಷ ರೂಪಾಯಿ ಕಂಪನಿಗೆ ವಂಚಿಸಿದೆ ಎಂದು ಹೇಳಲಾಗಿದೆ.
2025 ನವೆಂಬರ್ 19ರಂದು ಎಟಿಎಂಗೆ ಹಣ ತುಂಬಲು ಹೊರಟ್ಟಿದ್ದ ವ್ಯಾನ್ ತಡೆದು 7.11 ಕೋಟಿ ರೂಪಾಯಿ ಲೂಟಿ ಮಾಡಿದ್ದ ಘಟನೆ ಜಯದೇವ ಡೇರಿ ಸರ್ಕಲ್ ಬಳಿ ನಡೆದಿತ್ತು. ಸಿಎಂಎಸ್ ಕಂಪನಿಯ ಹಣ ಲೂಟಿ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು, ಈ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು.


