ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಗೆ ಜೈಪುರ ಜಿಲ್ಲಾ ಗ್ರಾಹಕ ಆಯೋಗ ಸಂಖ್ಯೆ-2 ನೋಟಿಸ್ ಜಾರಿ ಮಾಡಿದೆ.
ಮೂವರು ನಟರ ಜೊತೆಗೆ ಗುಟ್ಕಾ ತಯಾರಿಕಾ ಕಂಪನಿ ಜೆಬಿ ಇಂಡಸ್ಟ್ರೀಸ್ಗೆ ಸಹ ಸಮನ್ಸ್ ಕಳುಹಿಸಲಾಗಿದೆ. ಆಯೋಗವು ಎಲ್ಲರೂ ಇದೇ ಮಾರ್ಚ್ 19ರಂದು ಹಾಜರಾಗುವಂತೆ ಸೂಚನೆ ನೀಡಿದೆ
ಗುಟ್ಕಾ ಉತ್ಪನ್ನವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಅದರಲ್ಲಿ ಕೇಸರಿ ಇದೆ ಎಂದು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವ ಜಾಹೀರಾತು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ ಜೈಪುರ ನಿವಾಸಿ ಯೋಗೇಂದ್ರ ಸಿಂಗ್ ಬಡಿಯಾಲ್ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದು, ದೂರಿನ ಅನ್ವಯ ನೋಟಿಸ್ ನೀಡಲಾಗಿದೆ.
ಮೂವರು ಬಾಲಿವುಡ್ ನಟರು ಈ ಗುಟ್ಕಾ ಬ್ರ್ಯಾಂ್ಡ್ ಅನ್ನು ಪ್ರಚಾರ ಮಾಡುತ್ತಿದ್ದು, ಗ್ರಾಹಕರನ್ನು ಖರೀದಿಸುವಂತೆ ಆಕರ್ಷಿಸುತ್ತಿದ್ದಾರೆ. ಗುಟ್ಕಾ ಉತ್ಪನ್ನವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಅದರಲ್ಲಿ ಕೇಸರಿ ಇದೆ ಎಂದು ದಾರಿತಪ್ಪಿಸುತ್ತಿದ್ದಾರೆ. ಈ ದಾರಿತಪ್ಪಿಸುವ ಜಾಹೀರಾತು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅನ್ನು ಉಲ್ಲಂಘಿಸುತ್ತದೆ ಮತ್ತು ಸಾರ್ವಜನಿಕರನ್ನು ದಾರಿತಪ್ಪಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.
ಮೂವರು ನಟರು ಬಹಳ ಸಮಯದಿಂದ ಪಾನ್ ಮಸಾಲಾ ಮತ್ತು ಗುಟ್ಕಾ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. “ಟೇಸ್ಟ್ ಆಫ್ ಬಿಗ್ ಬ್ರಾಂಡ್ಸ್” ಎಂಬ ಟ್ಯಾಗ್ಲೈನ್ ಅಡಿಯಲ್ಲಿ ಈ ಜಾಹೀರಾತುಗಳು ಇದನ್ನು “ಕೇಸರ್” ಉತ್ಪನ್ನವೆಂದು ಪ್ರಚಾರ ಮಾಡುತ್ತವೆ. ಆದರೆ ವಾಸ್ತವದಲ್ಲಿ ಇದು ಗುಟ್ಕಾ ಉತ್ಪನ್ನಗಳ ಪ್ರಚಾರವಾಗಿದೆ ಎಂದು ಯೋಗೇಂದ್ರ ಸಿಂಗ್ ಹೇಳಿದ್ದಾರೆ.