ಸುತ್ತೂರಿನ ಶ್ರೀಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಡಿ.17ರಂದು ಮಳವಳ್ಳಿ ಪಟ್ಟಣದಲ್ಲಿ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ.
ರಾಷ್ಟ್ರಪತಿ ಆಗಮನದ ಹಿನ್ನೆಲೆ ಹೆಲಿಪ್ಯಾಡ್, ವೇದಿಕೆ ಹಾಗೂ ಇತರ ಸ್ಥಳಗಳನ್ನು ಮೈಸೂರು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾರೇಹಳ್ಳಿ ಬಳಿ ನಿರ್ಮಿಸುತ್ತಿರುವ ಹೆಲಿಪ್ಯಾಡ್‌ಗೆ ತೆರಳಿ ಗ್ರೀನ್ ರೂಂ ನಿರ್ಮಾಣ, ವಿದ್ಯುತ್ ಕಂಬಗಳ ತೆರವು, ಜಾಗ ಸಮತಟ್ಟಾಗಿಸುವುದು, ಕಾರ್ಯಕ್ರಮಕ್ಕೆ ರಾಷ್ಟ್ರಪತಿ ತೆರಳುವ ಮಾರ್ಗ, ಮೂಲ ಸೌಲಭ್ಯಗಳ ಅಳವಡಿಕೆ ಕುರಿತು ತೆಗೆದುಕೊಂಡಿರುವ ಕ್ರಮಗಳನ್ನು ಚರ್ಚಿಸಿದರು.
ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಆಡಳಿತಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ದಿನದ 24 ಗಂಟೆ ಆರೋಗ್ಯ ಸಿಬ್ಬಂದಿ ಲಭ್ಯವಾಗಿರಬೇಕು. ತುರ್ತು ಚಿಕಿತ್ಸೆಗೆ ಬೇಕಾದ ಆಗತ್ಯ ಕ್ರಮ ಕೈಗೊಳ್ಳಬೇಕೆಂದು ಡಾ. ಸಂಜಯ್ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಅವರಿಗೆ ಸೂಚನೆ ನೀಡಿದರು.
ಡಿ.17ರಿಂದ 22ರವರಗೆ ನಡೆಯಲಿರುವ ಜಯಂತಿಗೆ ರಾಷ್ಟ್ರಪತಿ, ಮುಖ್ಯಮಂತ್ರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಗಣ್ಯ ವ್ಯಕ್ತಿಗಳ ವಾಸ್ತವ್ಯಕ್ಕೆ ತಾಲೂಕು ವ್ಯಾಪ್ತಿಯ ಎಲ್ಲಾ ಲಾಡ್ಜ್, ಕಲ್ಯಾಣ ಮಂಟಪಗಳ, ರೆಸಾರ್ಟ್ಸ್ ಗಳ, ರೂಮುಗ ಬುಕಿಂಗ್, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕುರಿತು ಎಚ್ಚರಿಕೆ ವಹಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದು, ರಾಷ್ಟ್ರಪತಿಗಳ ಕರ್ತವ್ಯದಲ್ಲಿ ಲೋಪ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ, ಹೆಲಿಪ್ಯಾಡ್ ಸ್ಥಳಗಳಲ್ಲಿ ಅಗ್ನಿ ಶಾಮಕ ದಳದ ವಾಹನ ನಿಯೋಜಿಸಬೇಕು. ರಾಷ್ಟ್ರಪತಿಗಳ ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಲೋಪ- ದೋಷಗಳು ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಪ್ರಮುಖ ಇಲಾಖೆಗಳಿಂದ ಸ್ಟಾಲ್, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ.


