ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಧ್ಯಾರಾಧನಾ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು. ಈ ಶುಭ ಸಂದರ್ಭದಲ್ಲಿ ಮಂತ್ರಾಲಯದಲ್ಲಿ ಲಕ್ಷಾಂತರ ಭಕ್ತರು ಶ್ರೀ ರಾಯರ ದಿವ್ಯ ದರ್ಶನ ಪಡೆದು ಸಂತುಷ್ಟರಾದರು.
ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಬೃಂದಾವನಕ್ಕೆ ಪ.ಪೂ.ಶ್ರೀ ಸ್ವಾಮೀಜಿಯವರು ಮಹಾ ಪಂಚಾಮೃತಾಭಿಷೇಕ ನೆರವೇರಿಸಿದ್ದು, ಅಪಾರ ಭಕ್ತ ಸಮೂಹ ಕಣ್ತುಬಿಸಿಕೊಂಡಿತು.
ಶ್ರೀರಾಯರ ಸುವರ್ಣ ಪ್ರತೀಕವನ್ನು ಸುವರ್ಣ ರಥದಲ್ಲಿರಿಸಿ ಶ್ರೀ ಮಠದ ಪ್ರಾಕಾರದಲ್ಲಿ ಪ್ರಾತಃಕಾಲ ರಥೋತ್ಸವ ನಡೆಸಲಾಯಿತು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಭಜನೆಗಳನ್ನು ಹಾಡುತ್ತಾ “ಓಂ ಶ್ರೀ ರಾಘವೇಂದ್ರಾಯ ನಮಃ” ಎಂದು ಭಕ್ತಿಯಿಂದ ಸಂಭ್ರಮಿಸಿದರು.
ನಾಳೆ ಮಂಗಳವಾರ ಗುರುರಾಯರ ಉತ್ತರಾರಾಧನೆ ವೈಭದಿಂದ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಸ್ಮರಣೆ ಮಾಡಲಿದ್ದಾರೆ.