ಚೆನ್ನೈ: ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ ದಾಟಿದ ಆರೋಪದ ಮೇಲೆ ರಾಮೇಶ್ವರದ 32 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಭಾನುವಾರ ಮುಂಜಾನೆ ಈ ಬೆಳವಣಿಗೆ ನಡೆದಿದ್ದು, ಐದು ದುಬಾರಿ ಯಾಂತ್ರೀಕೃತ ದೋಣಿಗಳನ್ನು ಕೂಡ ಶ್ರೀಲಂಕಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಂಧಿತ ಮೀನುಗಾರರನ್ನು ಹೆಚ್ಚಿನ ವಿಚಾರಣೆಗಾಗಿ ಶ್ರೀಲಂಕಾದ ಜಾಫ್ನಾಕ್ಕೆ ಕರೆದೊಯ್ಯಲಾಗಿದೆ ಎಂದು ರಾಮೇಶ್ವರಂನ ಮೀನುಗಾರರ ಮುಖಂಡರು ತಿಳಿಸಿದ್ದಾರೆ.
ಶ್ರೀಲಂಕಾದ ಜಲಪ್ರದೇಶದಲ್ಲಿ ಅಂತರರಾಷ್ಟ್ರೀಯ ಕಡಲ ಗಡಿ ರೇಖೆ (ಐಎಂಬಿಎಲ್) ದಾಟಿದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ಕರಾವಳಿ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಬಂಧಿತ ಮೀನುಗಾರರ ಕುಟುಂಬಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.
ನಿರಂತರವಾಗಿ ಮೀನುಗಾರರ ಬಂಧನಗಳನ್ನು ಖಂಡಿಸಿ ರಾಮೇಶ್ವರಂ ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸಲು ಮೀನುಗಾರರ ಸಂಘದ ಮುಖಂಡರು ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಬಂಧಿತ ಮೀನುಗಾರರು ಮತ್ತು ವಶಪಡಿಸಿಕೊಂಡ ದೋಣಿಗಳ ಬಿಡುಗಡೆಗಾಗಿ ತ್ವರಿತ ರಾಜತಾಂತ್ರಿಕ ಕ್ರಮ ತೆಗೆದುಕೊಳ್ಳುವಂತೆ ಮೀನುಗಾರರ ಮುಖಂಡರು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಶ್ರೀಲಂಕಾದೊಂದಿಗೆ ದ್ವಿಪಕ್ಷೀಯ ಒಪ್ಪಂದದ ಮೂಲಕ ಶಾಶ್ವತ ಪರಿಹಾರಕ್ಕೆ ಅವರು ಕರೆ ನೀಡಿದ್ದಾರೆ. ತಮಿಳುನಾಡಿನಾದ್ಯಂತದ ಮೀನುಗಾರರ ಸಂಘಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಬಂಧನಗಳು ನಡೆಯದಂತೆ ತುರ್ತಾಗಿ ಮಧ್ಯಪ್ರವೇಶಿಸುವಂತೆ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಹಿಂದೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದು, ಬಂಧಿತ ಮೀನುಗಾರರ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನ ಮಾಡುವಂತೆ ಒತ್ತಾಯಿಸಿದ್ದರು.
ಪದೇ ಪದೆ ಬಂಧನಗಳು ಮತ್ತು ದೋಣಿ ವಶಪಡಿಸಿಕೊಳ್ಳುವಿಕೆಯಿಂದ ಉಂಟಾಗುವ ತೀವ್ರ ಆರ್ಥಿಕ ದುಷ್ಪರಿಣಾಮವನ್ನು ಸಿಎಂ ಸ್ಟಾಲಿನ್ ತಮ್ಮ ಪತ್ರದಲ್ಲಿ ಒತ್ತಿಹೇಳಿದ್ದಾರೆ.
“ಪುನರಾವರ್ತಿತ ಬಂಧನಗಳು ಮತ್ತು ಮುಟ್ಟುಗೋಲುಗಳು ನಮ್ಮ ಮೀನುಗಾರರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿವೆ. ಬೆಸ್ತರ ಹಕ್ಕುಗಳನ್ನು ರಕ್ಷಿಸಲು ತ್ವರಿತ ರಾಜತಾಂತ್ರಿಕ ಹಸ್ತಕ್ಷೇಪ ಅತ್ಯಗತ್ಯ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಫೆಬ್ರವರಿ 19 ರಂದು ರಾತ್ರಿ ಶ್ರೀಲಂಕಾ ನೌಕಾಪಡೆಯು ತನ್ನ ಪ್ರಾದೇಶಿಕ ಜಲಪ್ರದೇಶವನ್ನು ಅತಿಕ್ರಮಿಸಿದ ಆರೋಪದ ಮೇಲೆ ರಾಮೇಶ್ವರಂನ 10 ಮೀನುಗಾರರನ್ನು ಬಂಧಿಸಿತ್ತು. ಬುಧವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಮೂರು ಯಾಂತ್ರೀಕೃತ ಮೀನುಗಾರಿಕಾ ದೋಣಿಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.