ಕೊಲಂಬೋ: ಶ್ರೀಲಂಕಾದ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಮಿತ್ರ ವಿಭೂಷಣ’ ಪದಕವನ್ನು ನೀಡಲಾಯಿತು. ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಶನಿವಾರ ಪ್ರಧಾನಿ ಮೋದಿ ಅವರಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’ ಪದಕವನ್ನು ಪ್ರಧಾನ ಮಾಡಿದರು.
ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದ ಪ್ರಧಾನಿ ಮೋದಿ ಅವರು ಶ್ರೀಲಂಕಾದ ಅಧ್ಯಕ್ಷ ದಿಸಾನಾಯಕೆಗೆ ಧನ್ಯವಾದ ಹೇಳಿದ್ದು, ಈ ಗೌರವವನ್ನು 140 ಕೋಟಿ ಭಾರತೀಯರಿಗೆ ಅರ್ಪಿಸಿದ್ದಾರೆ. “ಇದು ಶ್ರೀಲಂಕಾ ಮತ್ತು ಭಾರತದ ಜನರ ನಡುವಿನ ಐತಿಹಾಸಿಕ ಸಂಬಂಧ ಮತ್ತು ಆಳವಾದ ಸ್ನೇಹವನ್ನು ತೋರಿಸುತ್ತದೆ. ಈ ಗೌರವಕ್ಕಾಗಿ ನಾನು ಶ್ರೀಲಂಕಾ ಅಧ್ಯಕ್ಷರು, ಶ್ರೀಲಂಕಾ ಸರ್ಕಾರ ಮತ್ತು ಶ್ರೀಲಂಕಾದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದು ವಿದೇಶಿ ರಾಷ್ಟ್ರವೊಂದು ಪ್ರಧಾನಿ ಮೋದಿಗೆ ನೀಡಿದ 22ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು, ಎರಡೂ ದೇಶಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿ ಅವರ ಅಸಾಧಾರಣ ಪ್ರಯತ್ನಗಳಿಗಾಗಿ ಈ ಗೌರವವನ್ನು ನೀಡಲಾಗಿದೆ.
ಶ್ರೀಲಂಕಾದ ‘ಮಿತ್ರ ವಿಭೂಷಣ’ ಪದಕದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ನನಗೆ ಶ್ರೀಲಂಕಾ ಮಿತ್ರ ವಿಭೂಷಣ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಈ ಪದಕವು ಭಾರತ-ಶ್ರೀಲಂಕಾ ಸಂಬಂಧಗಳ ಆಳವನ್ನು ಪ್ರತಿಬಿಂಬಿಸುತ್ತದೆ. ಈ ಗೌರವವು ನನ್ನ ಗೌರವ ಮಾತ್ರವಲ್ಲ, 140 ಕೋಟಿ ಭಾರತೀಯರ ಗೌರವವಾಗಿದೆ. ಇದು ಭಾರತ ಮತ್ತು ಶ್ರೀಲಂಕಾ ನಡುವಿನ ಐತಿಹಾಸಿಕ ಸಂಬಂಧಗಳು ಮತ್ತು ಆಳವಾದ ಸ್ನೇಹಕ್ಕೆ ಸಂದ ಗೌರವವಾಗಿದೆ ಎಂದಿದ್ದಾರೆ.
ಶ್ರೀಲಂಕಾ ನಮ್ಮ ನೆರೆಯ ರಾಷ್ಟ್ರ ಮಾತ್ರವಲ್ಲದೆ ನಮ್ಮ ಸಾಂಪ್ರದಾಯಿಕ ಸ್ನೇಹಿತ ಕೂಡ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತ ಮತ್ತು ಶ್ರೀಲಂಕಾ ಒಂದೇ ರೀತಿಯ ಭದ್ರತಾ ಹಿತಾಸಕ್ತಿಗಳನ್ನು ಹೊಂದಿವೆ. ನಾವು ಸ್ನೇಹಪರ ರಾಷ್ಟ್ರಗಳಿಗೆ ಆದ್ಯತೆ ನೀಡುತ್ತೇವೆ. ಎರಡೂ ದೇಶಗಳ ನಡುವೆ ಅನೇಕ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಎರಡೂ ದೇಶಗಳ ಭದ್ರತೆ ಪರಸ್ಪರ ಅವಲಂಬಿತವಾಗಿದೆ. ಶ್ರೀಲಂಕಾ ಮತ್ತೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಶ್ರೀಲಂಕಾ ಜನರ ತಾಳ್ಮೆ ಮತ್ತು ಧೈರ್ಯಕ್ಕೆ ನಮನಗಳು. ಭಾರತವು ಶ್ರೀಲಂಕಾಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಮೋದಿಗೆ ನೀಡಲಾದ ಈ ಪದಕವನ್ನು ಧರ್ಮ ಚಕ್ರ ಎಂದು ಕರೆಯಲಾಗುತ್ತದೆ. ಇದು ಎರಡೂ ದೇಶಗಳ ಸಾಂಸ್ಕೃತಿಕ ಸಂಪ್ರದಾಯಗಳನ್ನು ರೂಪಿಸಿದ ಹಂಚಿಕೆಯ ಬೌದ್ಧ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಕಮಲದ ದಳಗಳಿಂದ ಸುತ್ತುವರೆದಿರುವ ಭೂಗೋಳದೊಳಗೆ ಚಿತ್ರಿಸಲಾದ 9 ಅಮೂಲ್ಯ ರತ್ನಗಳಿಂದ ಇದನ್ನು ಸಿದ್ಧಪಡಿಸಲಾಗಿದೆ. ಇದು ಸೂರ್ಯ ಮತ್ತು ಚಂದ್ರ, ಪ್ರಾಚೀನ ಭೂತಕಾಲದಿಂದ ಅನಂತ ಭವಿಷ್ಯದವರೆಗೆ ವಿಸ್ತರಿಸಿರುವ ಕಾಲಾತೀತ ಬಂಧವನ್ನು ಸೂಚಿಸುತ್ತದೆ. ಈ ಅಂಶಗಳು ಎರಡು ರಾಷ್ಟ್ರಗಳ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಸುಂದರವಾಗಿ ಸೆರೆಹಿಡಿಯುತ್ತವೆ.