ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಈ ಬಾರಿ ಭಕ್ತರ ಸಂಖ್ಯೆ ಅಂದಾಜು ಮೀರಿ ದಾಖಲೆ ಪ್ರಮಾಣದಲ್ಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕೇರಳ ಹೈಕೋರ್ಟ್ ಮಧ್ಯ ಪ್ರವೇಶಿಸಿದೆ. ನವೆಂಬರ್ 24ರವರೆಗೆ ದಿನಕ್ಕೆ 5,000 ಭಕ್ತರಿಗೆ ಮಾತ್ರ ಸ್ಪಾಟ್ ಬುಕಿಂಗ್ ಅವಕಾಶ ನೀಡಲಾಗಿದೆ.
ನವೆಂಬರ್ 15ರಿಂದ ಆರಂಭವಾದ ಮಂಡಲ ಪೂಜೆ ಅವಧಿಯಲ್ಲೇ ದಿನನಿತ್ಯ 80,000ಕ್ಕೂ ಅಧಿಕ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಮಕರವಿಳಕ್ಕು ಸಮೀಪಿಸುತ್ತಿದ್ದಂತೆ ಈ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಹೈಕೋರ್ಟ್ ಸ್ಪಾಟ್ ಬುಕಿಂಗ್‌ಗೆ ಕಠಿಣ ನಿಯಮ ಜಾರಿಗೊಳಿಸಿದೆ. ಪಂಪಾ ಮತ್ತು ಚಂದನಕುಡಂ ಸೇರಿದಂತೆ ಮೂರು ಪ್ರಮುಖ ಸ್ಥಳಗಳಲ್ಲಿದ್ದ ಸ್ಪಾಟ್ ಬುಕಿಂಗ್ ಕೌಂಟರ್‌ಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ನಿಲಕ್ಕಲ್ ಮತ್ತು ವಂಡಿಪೆರಿಯಾರ್ ಎಂಬ ಎರಡೇ ಕೇಂದ್ರಗಳಲ್ಲಿ ಸ್ಪಾಟ್ ಬುಕಿಂಗ್ ಸೌಲಭ್ಯ ಇರುತ್ತದೆ.
ಶಬರಿಮಲೆಯಲ್ಲಿ ಸೀಮಿತ ಮೂಲಸೌಕರ್ಯವಿದ್ದು, ಪರಿಸರದ ಸಾಮರ್ಥ್ಯ ಇದಕ್ಕಿಂತ ಹೆಚ್ಚಿನ ಭಕ್ತರನ್ನು ತಡೆಯುವಂತಿಲ್ಲ. ಸನ್ನಿಧಾನಕ್ಕೆ ಏಕೈಕ ಮಾರ್ಗವಾದ 18 ಪವಿತ್ರ ಮೆಟ್ಟಿಲುಗಳು, ಪಂಪಾ ನದಿ ತೀರ, ತಿರುವಂಕೂರು ಕಾಡು ಎಲ್ಲವೂ ಒಂದೇ ಸಮಯದಲ್ಲಿ ಲಕ್ಷಾಂತರ ಜನರನ್ನು ತಾಳಿಕೊಳ್ಳಬೇಕಿದೆ. ಭದ್ರತೆ, ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಕರ್ಯ, ತ್ಯಾಜ್ಯ ನಿರ್ವಹಣೆ ಸಮಸ್ಯೆ ಎದುರಾಗುತ್ತದೆ. ಸ್ಪಾಟ್‌ನಲ್ಲಿ ಪಾಸ್ ಪಡೆಯಲು ಬಂದ ಲಕ್ಷಾಂತರ ಭಕ್ತರು ನಿಲಕ್ಕಲ್-ವಂಡಿಪೆರಿಯಾರ್ ಕೇಂದ್ರಗಳ ಬಳಿ ದೀರ್ಘ ಸರತಿಯಲ್ಲಿ ನಿಂತಿದ್ದಾರೆ. ರಾತ್ರಿಯಿಡೀ ಕಾದರೂ ಪಾಸ್ ಸಿಗದೆ ಮರಳುತ್ತಿದ್ದಾರೆ. ದೇವಸ್ವಂ ಬೋರ್ಡ್ ಈಗಾಗಲೇ ವರ್ಚುವಲ್ ಕ್ಯೂ ವ್ಯವಸ್ಥೆ ಸುಗಮಗೊಳಿಸಿದೆ. ಸ್ಪಾಟ್ ಬುಕಿಂಗ್‌ಗೆ ಬಂದವರಿಗೆ ನಿರಾಸೆಯಾಗುತ್ತಿದೆ.
ಯಾತ್ರಿಗಳು ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್ ಬಳಸುವುದು ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಮಿದುಳು ತಿನ್ನುವ ಅಮೀಬಾ ಕುರಿತು ಆರೋಗ್ಯ ಸಚಿವಾಲಯ ಸುರಕ್ಷತಾ ಸಲಹಾ ಮಾರ್ಗಸೂಚಿಯನ್ನು ಹೊರಡಿಸಿದೆ.


