ರಾಯಚೂರಿನಲ್ಲಿ ನಕಲಿ ಮಸಾಲಾ ಪದಾರ್ಥಗಳ ತಯಾರಿಕೆ ದಂಧೆ ನಡೆಯುತ್ತಿರುವುದು ಬಯಲಾಗಿದೆ. ಕಲಬೆರಕೆ ಮಸಾಲಾ ತಯಾರಿಕಾ ಅಡ್ಡೆ ಮೇಲೆ ಆಹಾರ ಸುರಕ್ಷಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಸಾಲೆ ಪದಾರ್ಥಗಳಿಗೆ ನಾನಾ ರಾಸಾಯನಿಕಗಳನ್ನು ಬಳಸಿ ಅಸಲಿಯಾಗಿ ಕಾಣುವಂತೆ ಮಾಡಿ ಜನರ ಜೀವದ ಜೊತೆ ಚೆಲ್ಲಾಡವಾಡುವ ದಂಧೆ ಇದಾಗಿದೆ.
ಮಾನ್ವಿ ಪಟ್ಟಣದ ಇಸ್ಲಾಂ ನಗರದ ಪಾಳು ಬಿದ್ದ ಮನೆಯಲ್ಲಿ ಈ ದಂಧೆ ಕಾರ್ಯಾಚರಿಸುತ್ತಿದೆ. ಬಿರಿಯಾನಿ ಎಲೆ, ದನಿಯಾ ಕಾಳು, ಕಾಳು ಮೆಣಸು, ಚಕ್ಕೆ, ಚಿಕನ್ ಮಸಾಲಾ, ಸಾಂಬಾರ್ ಮಸಾಲಾಕ್ಕೆನಕಲಿ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ದಾಳಿ ವೇಳೆ ಒಟ್ಟು 846 ಕೆಜಿ ನಾನಾ ನಕಲಿ ಮಸಾಲಾ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
367 ಕೆಜಿ ಬಣ್ಣ ಮಿಶ್ರಿತ ದನಿಯಾ ಕಾಳು, 220 ಕೆಜಿ ಅರಿಶಿನ ಹಾಗೂ ಕಡಲೆಕಾಯಿ, 150 ಕೆಜಿ ಕೆಂಪು ಕಡಲೆ, 16 ಕೆಜಿ ಕೆಂಪು ಕೊಬ್ಬರಿ, 6.5 ಕೆಜಿ ನೀಲಗಿರಿ ಎಲೆ, 43 ಕೆಜಿ ಕಾಳು ಮೆಣಸಿನಂತಿರುವ ಪಪ್ಪಾಯ ಬೀಜ, 42 ಕೆಜಿ ಚಕ್ಕೆ, 500 ಗ್ರಾಂ ಹಳದಿ ಹಾಗೂ ಕೆಂಪು ಬಣ್ಣದ ಕೆಮಿಕಲ್ ಪೌಡರ್ ವಶಕ್ಕೆ ಪಡೆದಿದ್ದಾರೆ.