ಚುನಾವಣಾ ಆಯೋಗವು ನವೆಂಬರ್ ಆರಂಭದಿಂದ ಹಂತ ಹಂತವಾಗಿ ದೇಶಾದ್ಯಂತ ಚುನಾವಣಾ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR ) ನಡೆಸಲಿದೆ. 2026 ರಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಮೊದಲು ಈ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಈ ಸಂಬಂಧ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಿದ್ಧತೆಯನ್ನು ಪರಿಶೀಲಿಸುವ ಸಮ್ಮೇಳನ ನಡೆದಿದೆ ಎಂದು ಎಂದು ಚುನಾವಣಾ ಆಯೋಗ ತಿಳಿಸಿದೆ. ಅಂತಿಮ ದಿನಾಂಕಗಳು ಮತ್ತು ವಿವರಗಳು ಇನ್ನಷ್ಟೆ ಪ್ರಕಟವಾಗಬೇಕಿದೆ.
ಮುಂದಿನ ವರ್ಷ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಚುನಾವಣೆ ಎದುರಿಸಲಿವೆ. ಮತದಾರರು ತಾವು ಪ್ರಸ್ತುತ ವಾಸಿಸುತ್ತಿರುವ ರಾಜ್ಯದ ಚುನಾವಣಾ ಪಟ್ಟಿಯಲ್ಲದೆ ಯಾವುದೇ ರಾಜ್ಯದ ಕೊನೆಯ ವಿಶೇಷ ಪರಿಷ್ಕರಣೆಯ ಚುನಾವಣಾ ಪಟ್ಟಿಯಿಂದ ತಮ್ಮ ಹೆಸರಿನ ಪ್ರತಿಗಳನ್ನು ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ನೀಡುವ ನಿರೀಕ್ಷೆಯಿದೆ. ಬಿಹಾರದ ಚುನಾವಣಾ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಸಮಯದಲ್ಲಿ ಮತದಾರರು ಬಿಹಾರದ ಕೊನೆಯ ವಿಶೇಷ ಪರಿಷ್ಕರಣೆಯ ಪಟ್ಟಿಯಿಂದ ಮಾತ್ರ ಪ್ರತಿಗಳನ್ನು ಸಲ್ಲಿಸಬೇಕಾಗಿತ್ತು.
ಅಸ್ಸಾಂನ ಅಧಿಕಾರಿಗಳು ರಾಷ್ಟ್ರೀಯ ನಾಗರಿಕರ ನೋಂದಣಿ ಪ್ರಕಟವಾದ ನಂತರವೇ ತಮ್ಮ ರಾಜ್ಯದಲ್ಲಿ ತೀವ್ರ ಪರಿಷ್ಕರಣೆ ನಡೆಸಲು ಬಯಸಿದ್ದಾರೆ. ಅಸ್ಸಾಂ ಎನ್‌ಸಿಆರ್ ಸಿದ್ಧಪಡಿಸುವ ಕೆಲಸವನ್ನು ಈಗಾಗಲೇ ಕೈಗೊಂಡಿದೆ. ಹೀಗಾಗಿ ಅಸ್ಸಾಂ ಮೊದಲ ಹಂತದಲ್ಲಿ ಸೇರ್ಪಡೆಯಾಗುತ್ತದೆಯೇ ಎಂಬ ಬಗ್ಗೆ ಚುನಾವಣಾ ಆಯೋಗ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.