ಭಾರತೀಯ ವಾಯುಪಡೆಯು ಆಪರೇಷನ್ ಸಿಂಧೂರ ಮೂಲಕ ಕಾಶ್ಮೀರದ 9 ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ಇನ್ನು ಮುಂದಿನ ದಿನಗಳಲ್ಲೂ ಸೇನೆಗೆ ಒಳಿತಾಗಲಿ ಎಂದು ಬೆಂಗಳೂರಿನ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಗವಿಗಂಗಾಧರ ದೇಗುಲದಲ್ಲಿ ದೇಶವನ್ನು ರಕ್ಷಿಸುವ ಸೇನೆಗೆ ಬಲ ನೀಡು ತಾಯಿ ಎಂದು ದುರ್ಗಾ ಹೋಮ ಮಾಡಲಾಗಿದ್ದು, ದುರ್ಗಾ ಹೋಮದ ಜೊತೆಗೆ ವಿಶೇಷ ಪೂಜೆ ಕೂಡ ನಡೆಸಲಾಗಿದೆ. ಶತ್ರುಗಳ ಸಂಹಾರದ ಜೊತೆಗೆ ಸೈನಿಕರ ಶಕ್ತಿಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಸೇನೆಯ ಒಳಿತಿಗಾಗಿ, ಶತ್ರು ಸಂಹಾರಕ್ಕಾಗಿ ಹೋಮ ಮಾಡಲಾಗುತ್ತಿದೆ. ನಾವು ಹಣೆಗೆ ತಿಲಕ ಸಿಂಧೂರ ಹಚ್ಚುತ್ತೇವೆ. ನಮ್ಮ ಹೆಣ್ಣುಮಕ್ಕಳ ಸಿಂಧೂರ ತೆಗೆಯಲು ಬಂದವರನ್ನು, ನಾಶ ಮಾಡಲು ಬಂದವರನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಗವಿಗಂಗಾಧರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.
ಸೈನಿಕರ ಒಳಿತಿಗಾಗಿ ಬನಶಂಕರಿ ದೇವಾಲಯದಲ್ಲಿ ಬನಶಂಕರಿ ದೇವಿಗೆ ಕುಂಕುಮಾರ್ಚನೆ ನಡೆಯಿತು. ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ದೇವರಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಶಾಂತಿ ನೆಲೆಸಲಿ ಎಂದು ರುದ್ರಪಾರಾಯಣ ಪೂಜೆ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯೋಧರ ಒಳಿತಿಗಾಗಿ ಪೂಜೆ ಸಲ್ಲಿಸಲಾಗಿದೆ. ಶ್ರೀರಂಗ ಪಟ್ಟಣ ತಾಲೂಕಿನ ನಿಮಿಷಾಂಭ ದೇಗುಲದಲ್ಲಿ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಲಾಗಿದೆ.
ಆಪರೇಷನ್ ಸಿಂಧೂರ ಯಶಸ್ವಿಯಾದ ಬಳಿಕ ಮುಜರಾಯಿ ಇಲಾಖೆಯಡಿ ಬರುವ ಎಲ್ಲಾ ದೇವಾಲಯಗಳಲ್ಲಿ ಯೋಧರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಕೆಗೆ ಆದೇಶ ನೀಡಲಾಗಿತ್ತು.