Menu

ಎಂಎಸ್‌ಎಂಇ ವಲಯಕ್ಕೆ ಅನುಗುಣವಾಗಿ ವಿಶೇಷ ಉದ್ಯೋಗ ಮೇಳ ಆಯೋಜನೆ: ಡಾ. ಶರಣಪ್ರಕಾಶ್ ಪಾಟೀಲ್ ಭರವಸೆ

sharanu prakash patil

ಬೆಂಗಳೂರು: ಪ್ರತಿಭಾವಂತ ಕಾರ್ಮಿಕರಿಗೆ ಗೌರವಾನ್ವಿತ ವೇತನ ನೀಡಬೇಕಾದ ಅಗತ್ಯವಿದೆ. ಇಂಥವರನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಶುಕ್ರವಾರ ಆಯೋಜಿಸಿದ ಎಂಎಸ್‌ಎಂಇ ಮತ್ತು ಉದ್ಯೋಗಾವಕಾಶಗಳ ಸಮಾವೇಶವನ್ನು ಉದ್ಘಾಟಿಸಿ ಸಚಿವ ಡಾ. ಪಾಟೀಲ್ ಭಾಷಣ ಮಾಡಿದರು.

ಎಂಎಸ್‌ಎಂಇ ವಲಯದಲ್ಲಿ ಕಡಿಮೆ ವೇತನ ಇರುವ ಬಗ್ಗೆ ಮಾಹಿತಿ ಬಂದಿದೆ. ಬೆಂಗಳೂರಿನಂತಹ ನಗರದಲ್ಲಿ ಉದ್ಯೋಗಿಗಳು ಯೋಗ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ಗೌರವಾನ್ವಿತ ವೇತನವನ್ನು ಎಂಎಸ್‌ಎಂಇಗಳು ನೀಡಬೇಕು ಎಂದು ಕರೆ ನೀಡಿದರು.

“ಕರ್ನಾಟಕದ ಎರಡನೇ ಮತ್ತು ಮೂರನೇ ಹಂತದ ಪ್ರದೇಶಗಳಲ್ಲಿ ಕೌಶಲ್ಯಪೂರ್ಣ ಮತ್ತು ಅರ್ಹ ಉದ್ಯೋಗಿಗಳು ಬೆಂಗಳೂರಿನಲ್ಲಿ ಉದ್ಯೋಗಗಳನ್ನು ತ್ಯಜಿಸಿ ತವರು ಸ್ಥಳಗಳಿಗೆ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಲಬುರಗಿಯ ವ್ಯಕ್ತಿಯು ಕೇವಲ ₹20,000 ಮಾಸಿಕ ಸಂಬಳದೊಂದಿಗೆ ಬೆಂಗಳೂರಿನಲ್ಲಿ ಹೇಗೆ ಬದುಕಬಹುದು?” ಎಂದು ಸಚಿವರು ಪ್ರಶ್ನಿಸಿದರು.

ಹಲವಾರು ಎಂಎಸ್‌ಎಂಇ ಕೈಗಾರಿಕೋದ್ಯಮಿಗಳು ಕೌಶಲ್ಯಪೂರ್ಣ ಕಾರ್ಮಿಕರ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಈಗಿರುವ ಉದ್ಯೋಗಿಗಳು ದೊಡ್ಡ ಕೈಗಾರಿಕೆಗಳಿಗೆ ಸೇರಲು ಹೋಗುತ್ತಿದ್ದಾರೆ ಎಂಬ ವಿಷಯದ ಬಗ್ಗೆಯೂ ಚರ್ಚೆಯಾಗಿದೆ ಎಂದರು.

ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಎಂಎಸ್‌ಎಂಇಗಳು ಅತಿದೊಡ್ಡ ಉದ್ಯೋಗ ಸೃಷ್ಟಿಕರ್ತರು. ಆದಾಗ್ಯೂ, ಕಡಿಮೆ ವೇತನದಿಂದ ಪ್ರತಿಭೆಯನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. “ತಂತ್ರಜ್ಞಾನ ವಲಯವು ನೀಡುವ ಸಂಬಳವನ್ನು ನೀಡಬೇಕು ಎಂದು ಹೇಳುತ್ತಿಲ್ಲ. ಆದರೆ ಬೆಂಗಳೂರಿನಲ್ಲಿ ಘನತೆಯಿಂದ ಬದುಕಲು ಉದ್ಯೋಗಿಗಳಿಗೆ ಅವರ ಕೌಶಲ್ಯ ಮತ್ತು ಪ್ರತಿಭೆಗೆ ಅನುಗುಣವಾಗಿ ವೇತನ ನೀಡಬೇಕು” ಎಂದು ಡಾ. ಪಾಟೀಲ್‌ ತಿಳಿಸಿದರು.

ಕೈಗಾರಿಕೆಗಳಿಗೆ ವೈವಿಧ್ಯಮಯ ಮತ್ತು ನಿರ್ದಿಷ್ಟ ಕೌಶಲ್ಯ ಹೊಂದಿರುವ ಕಾರ್ಮಿಕರ ಅಗತ್ಯವಿದೆ. ನಮ್ಮ ಇಲಾಖೆಯು ಎಂಎಸ್‌ಎಂಇಗಳ ಅಗತ್ಯಗಳನ್ನು ಪೂರೈಸುವ ವಿಶೇಷ, ವಲಯ-ನಿರ್ದಿಷ್ಟ ಉದ್ಯೋಗ ಮೇಳಗಳನ್ನು ಆಯೋಜಿಸುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಹೆಚ್ಚಿನ ಸಂಖ್ಯೆಯ ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. CII ನ ರವೀಂದ್ರ ಶ್ರೀಕಂಠನ್, ಸ್ಯಾಮ್ ಚೆರಿಯನ್, ರವಿ ರಾಘವನ್ ಮತ್ತು ಸೊಲೊಮನ್ ಪುಷ್ಪರಾಜ್ ಹಾಗೂ ಇತರರು ಹಾಜರಿದ್ದರು.

Related Posts

Leave a Reply

Your email address will not be published. Required fields are marked *