Menu

ಹೊರ ನಡೆದ ಸ್ಪೀಕರ್‌ ಖಾದರ್‌ ಮರಳಿ ಸದನಕ್ಕೆ; ಮೂವರು ಅಧಿಕಾರಿಗಳ ತಲೆದಂಡ

ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡುತ್ತಿಲ್ಲವೆಂದು ಸಿಟ್ಟಿಗೆದ್ದ ಸ್ಪೀಕರ್‌ ಯು.ಟಿ. ಖಾದರ್ ಪೀಠದಿಂದ ಎದ್ದು ಸದನ ಮುಂದೂಡಿ ಹೊರನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸಿ ಸದನಕ್ಕೆ ವಾಪಸ್‌ ಕಳಿಸಿದ್ದಾರೆ.

ಈ ಸಂಬಂಧ ಅಲ್ಪಸಂಖ್ಯಾತ ಮತ್ತು ಸಾರ್ವಜನಿಕ ಕಾರ್ಯ ಇಲಾಖೆಗಳ ಮೂವರು ಹಿರಿಯ ಅಧಿಕಾರಿಗಳ ತಲೆದಂಡವಾಗಿದೆ. ಸಮರ್ಪಕ ಉತ್ತರ ನೀಡದ 3-4 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಸ್ಪೀಕರ್ ಸೂಚಿಸಿದ್ದಾರೆ.

ಅಧಿವೇಶನದ ವೇಳೆ ಪಿಡಬ್ಲ್ಯುಡಿ, ಪಶುಸಂಗೋಪನೆ, ಸಾರಿಗೆ, ಐಟಿ-ಬಿಟಿ, ಡಿಪಿಎಆರ್ ಮತ್ತು ಕಂದಾಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಶಾಸಕರ ಲಿಖಿತ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದಿದ್ದಕ್ಕೆ ಸ್ಪೀಕರ್ ಗರಂ ಆಗಿದ್ದರು. ಶಾಸಕರು ಪ್ರಶ್ನೆ ಕೇಳುವುದು ಜನರ ಹಕ್ಕು. ಅದಕ್ಕೆ ಸರಿಯಾದ ಉತ್ತರ ಬರಬೇಕು ಎಂದು ಹೇಳಿ ಸದನ ಮುಂದೂಡಿ ಸ್ಪೀಕರ್‌ ಹೋಗಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೀಕರ್ ಕಚೇರಿಗೆ ತೆರಳಿ ಸಂಧಾನ ನಡೆಸಿದರು. ಪ್ರತಿಪಕ್ಷ ನಾಯಕರು ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ, ಎಲ್ಲಾ ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಬಗ್ಗೆ ಭರವಸೆ ನೀಡಿದರು. ನಂತರ ಸ್ಪೀಕರ್ ಸದನಕ್ಕೆ ಮರಳಿ ಕಲಾಪ ಪುನಾರಂಭಿಸಿದರು.

ಸ್ಪೀಕರ್ ಸೂಚನೆಯಂತೆ ಮೂವರು ಹಿರಿಯ ಅಧಿಕಾರಿಗಳ ತಲೆದಂಡವಾಗಿದ್ದು, ಉಳಿದ 3-4 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಮಧ್ಯಾಹ್ನದ ವೇಳೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಎಲ್ಲಾ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದು ಸೂಚನೆ ನೀಡಿದ್ದಾರೆ.

ವಿಧಾನ ಪರಿಷತ್ತಿನಲ್ಲೂ ಸಚಿವರ ಹಾಜರಾತಿ ಮತ್ತು ಅಧಿಕಾರಿಗಳ ಉತ್ತರದ ಕೊರತೆ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಛಲವಾದಿ ನಾರಾಯಣಸ್ವಾಮಿ ಅವರು “ಸಚಿವರು ಹಾಜರಿಲ್ಲ, ಅಧಿಕಾರಿಗಳೂ ಇಲ್ಲ. 126 ಪ್ರಶ್ನೆಗಳಿಗೆ ಉತ್ತರವಿಲ್ಲ. ಇದು ಏಕೆ” ಎಂದು ಪ್ರಶ್ನಿಸಿದರು. ಸಭಾಪತಿ ಸಭಾನಾಯಕ ಬೋಸರಾಜು ಅವರಿಗೆ ತಕ್ಷಣ ಉತ್ತರ ಕೊಡಿಸುವಂತೆ ಅಥವಾ ಕ್ರಮ ಜರುಗಿಸುವಂತೆ ಸೂಚಿಸಿದರು.

Related Posts

Leave a Reply

Your email address will not be published. Required fields are marked *