Sunday, September 28, 2025
Menu

ದಕ್ಷಿಣ ಭಾರತದ ಹೆಮ್ಮೆ ‘ಕಾವೇರಿ ಆರತಿ’: ಡಿಕೆ ಶಿವಕುಮಾರ್ ದೂರದೃಷ್ಟಿ, ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು

ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದೂರದೃಷ್ಟಿ ಮತ್ತು ಸಕ್ರಿಯ ಮುಂದಾಳತ್ವದ ಫಲವಾಗಿ, ಇದೇ ಸೆಪ್ಟೆಂಬರ್ 26 ರಿಂದ ಕೃಷ್ಣರಾಜ ಸಾಗರ (KRS) ಜಲಾಶಯದ ಬಳಿ ʻಕಾವೇರಿ ಆರತಿ’ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.

ಭಾರತದ ಪ್ರತಿಯೊಬ್ಬ ಪ್ರವಾಸಿ ಮತ್ತು ಅಧ್ಯಾತ್ಮಿಕ ಆಕಾಂಕ್ಷಿಯ ಪಾಲಿಗೆ ವಾರಾಣಸಿಯ ಗಂಗಾರತಿ ಒಂದು ಮರೆಯಲಾಗದ ದೃಶ್ಯ. ನಾನೂ ಸಹ ಕಳೆದ ಬಾರಿ ಕಾಶಿಗೆ ಭೇಟಿ ನೀಡಿದ್ದಾಗ, ಸೂರ್ಯಾಸ್ತದ ಸಮಯದಲ್ಲಿ ಘಾಟುಗಳಲ್ಲಿ ರಥದ ಮಾದರಿಯ ಆರತಿಯನ್ನು ಹಿಡಿದು, ಮಂತ್ರಘೋಷದೊಂದಿಗೆ ನಡೆಯುವ ಆ ಅಲೌಕಿಕ ಪೂಜೆಯನ್ನು ಕಣ್ತುಂಬಿಕೊಂಡು ಅಪಾರ ಖುಷಿ ಪಟ್ಟಿದ್ದೆ. ಅಂದು ಆ ದೃಶ್ಯ ನೋಡುವಾಗ, “ಅದೇ ರೀತಿ ನಮ್ಮ ಜೀವನಾಡಿ ಕಾವೇರಿಗೆ ಇಂತಹ ಭವ್ಯ ಪೂಜೆ ಯಾವಾಗ ದೊರೆಯುವುದೋ?” ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತ್ತು.

ಆದರೆ, ಕನ್ನಡಿಗರ ಆ ಸುಪ್ತ ಬಯಕೆ ಈಗ ನನಸಾಗುವ ಕಾಲ ಬಂದಿದೆ! ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿ ಮತ್ತು ಸಕ್ರಿಯ ಮುಂದಾಳತ್ವದ ಫಲವಾಗಿ, ಇದೇ ಸೆಪ್ಟೆಂಬರ್ 26 ರಿಂದ ಕೃಷ್ಣರಾಜ ಸಾಗರ (KRS) ಜಲಾಶಯದ ಬಳಿ ʻಕಾವೇರಿ ಆರತಿ’ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಗಂಗಾರತಿ ಕಂಡ ಕಣ್ಣುಗಳಿಗೆ ಈಗ ಕಾವೇರಿ ಆರತಿ ನೋಡುವ ಭಾಗ್ಯ ಒದಗಿಬಂದಿದೆ. ಈ ಐತಿಹಾಸಿಕ ಕ್ಷಣವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಇದು ಕನ್ನಡಿಗರು ತಮ್ಮ ಜೀವನಾಡಿ ಕಾವೇರಮ್ಮನಿಗೆ ನೀಡುತ್ತಿರುವ ಹೃದಯಪೂರ್ವಕ ಮತ್ತು ಅತ್ಯುನ್ನತ ಗೌರವವಾಗಿದೆ.

ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ನದಿಗಳು ಕೇವಲ ನೀರಿನ ಮೂಲಗಳಲ್ಲ, ಅವು ಜೀವನದಿಗಳು, ಆರಾಧ್ಯ ದೇವತೆಗಳು, ನಾಗರಿಕತೆಯ ತವರು. ಗಂಗೆಯ ಈ ಪಾವಿತ್ರ ಪೂಜೆಯ ಮಾದರಿಯಲ್ಲೇ, ಈಗ ದಕ್ಷಿಣ ಭಾರತದ ಜೀವನದಿ, ಕನ್ನಡಿಗರ ಜೀವಸೆಲೆ ಕಾವೇರಿಗೆ ವಿಶೇಷ ʻಕಾವೇರಿ ಆರತಿ’ಯನ್ನು ಸಮರ್ಪಿಸಲು ಕರ್ನಾಟಕ ರಾಜ್ಯ ಸರಕಾರ ಹೆಮ್ಮೆಯಿಂದ ಮುಂದಾಗಿದೆ. ಇದು ಒಂದು ಮಹತ್ತರವಾದ ಸಾಂಸ್ಕೃತಿಕ, ಆಧ್ಯಾತ್ಮಿಕ ಹೆಜ್ಜೆಯಾಗಿದೆ.

ಕಾವೇರಿ ತಾಯಿಯಿಂದ ನಮ್ಮ ನಾಡು, ನಮ್ಮ ಬದುಕು, ನಮ್ಮ ಕೃಷಿ ಸಮೃದ್ಧಿ ಪೋಷಿಸಲ್ಪಟ್ಟಿದೆ. ಈ ಕಾವೇರಿ ಆರತಿಯು, ನಮ್ಮ ರೈತರು ಮತ್ತು ಜನಸಾಮಾನ್ಯರ ಪರವಾಗಿ, ಜೀವ ನೀಡಿದ ತಾಯಿಯ ಋಣವನ್ನು ಭಕ್ತಿಯ ಮೂಲಕ ತೀರಿಸುವ ಒಂದು ಭಾವನಾತ್ಮಕ ಪೂಜೆಯಾಗಿದೆ. ಇಷ್ಟು ದಿನಗಳ ಕಾಲ ಮಾತಿಗೆ ಸಿಮಿತವಾಗಿದ್ದ ‘ಜೀವನಾಡಿ ಕಾವೇರಿ’ ಎನ್ನುವ ಶಬ್ದಕ್ಕೆ ಇದೀಗ ಒಂದು ದೃಶ್ಯರೂಪ, ಆಧ್ಯಾತ್ಮಿಕ ಸ್ಪರ್ಶ ಮತ್ತು ಮಹತ್ವದ ಅರ್ಥ ಬರಲಿದೆ.

ದೂರದೃಷ್ಟಿಯ ಚಿಂತನೆ: ಡಿ.ಕೆ. ಶಿವಕುಮಾರ್ ಅವರ ಅಚಲ ಕೊಡುಗೆ

ಈ ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮದ ಹಿಂದಿನ ದೂರದೃಷ್ಟಿ, ಅಚಲವಾದ ಇಚ್ಛಾಶಕ್ತಿ ಮತ್ತು ಸಕ್ರಿಯ ಮುಂದಾಳತ್ವ ಸಂಪೂರ್ಣವಾಗಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲುತ್ತದೆ. ಕಾವೇರಿ ನದಿಯ ಮಹತ್ವವನ್ನು ಅರಿತಿರುವ ಅವರು, ಕನ್ನಡಿಗರ ಭಾವನೆಗಳನ್ನು ಗೌರವಿಸಿ, ಗಂಗಾರತಿಯ ಮಾದರಿಯಲ್ಲೇ ಈ ಪವಿತ್ರ ಆಚರಣೆಯನ್ನು ರಾಜ್ಯದಲ್ಲಿ ಆರಂಭಿಸಲು ದೃಢ ನಿರ್ಧಾರ ಕೈಗೊಂಡರು. ಅವರ ಆಳವಾದ ಕಾಳಜಿ, ಬದ್ಧತೆ ಮತ್ತು ನಿರಂತರ ಪ್ರಯತ್ನಗಳ ಫಲವಾಗಿಯೇ, ಈ ಮಹೋನ್ನತ ಕಲ್ಪನೆಯು ಇಂದು ಸಾಕಾರಗೊಳ್ಳುತ್ತಿದೆ.

ಉಪ ಮುಖ್ಯಮಂತ್ರಿಗಳು ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ, ಕೆ.ಆರ್.ಎಸ್ ಬೃಂದಾವನದಲ್ಲಿ ಸ್ವತಃ ಸ್ಥಳ ಪರಿಶೀಲನೆ ನಡೆಸಿರುವುದು ಅವರ ಕಾರ್ಯತತ್ಪರತೆಗೆ ಸಾಕ್ಷಿ. ಕಾವೇರಿ ಆರತಿ ಸಮಿತಿ ಅಧ್ಯಕ್ಷರೂ ಆದ ರಾಮ್ ಪ್ರಸಾತ್ ಮನೋಹರ್ ಅವರ ಜೊತೆಗೂಡಿ, ಕಾರ್ಯಕ್ರಮದ ರೂಪುರೇಷೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದರು. ವೇದಿಕೆ ನಿರ್ಮಾಣ, ಆರತಿ ನಡೆಯುವ ಸ್ಥಳ, ಮತ್ತು ಸಾವಿರಾರು ಭಕ್ತರು ಹಾಗೂ ವೀಕ್ಷಕರಿಗೆ ಸುಗಮ ಆಸನ ವ್ಯವಸ್ಥೆ ಕಲ್ಪಿಸುವ ಕುರಿತು ಡಿಸಿಎಂ ಅವರು ಗಣ್ಯರ ಸಮ್ಮುಖದಲ್ಲಿ ಅಧಿಕಾರಿಗಳಿಗೆ ಯಾವುದೇ ಲೋಪವಿಲ್ಲದೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಚಿಸಿದ್ದಾರೆ. ಪೂರ್ವ ತಾಲೀಮಿನ ವೀಕ್ಷಣೆ ಮಾಡುವ ಮೂಲಕ ಅವರು ತೋರಿದ ಕಾಳಜಿಯು, ಈ ಆಚರಣೆ ನಾಡಿನಲ್ಲಿ ದೊಡ್ಡ ಉತ್ಸವವಾಗಿ ಹೊರಹೊಮ್ಮಲಿದೆ ಎನ್ನುವುದನ್ನು ಖಚಿತಪಡಿಸುತ್ತದೆ.

ಗಂಗಾ-ಕಾವೇರಿ ಸಮನ್ವಯ: ಅಭಿವೃದ್ಧಿಯ ಮಹತ್ವಾಕಾಂಕ್ಷೆ

ಗಂಗಾರತಿಯು ಆರಂಭವಾದಾಗಿನಿಂದ ಅದು ವಾರಣಾಸಿಯ ʻಸೆಂಟರ್ ಆಫ್ ಅಟ್ರ್ಯಾಕ್ಷನ್’ ಆಗಿ ಹೊರಹೊಮ್ಮಿದೆ. ಪ್ರಪಂಚದಾದ್ಯಂತದ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಆ ಆಧ್ಯಾತ್ಮಿಕ ವೈಭವವನ್ನು ಕಣ್ತುಂಬಿಕೊಳ್ಳಲು ವಾರಾಣಸಿಗೆ ಹರಿದುಬರುತ್ತಾರೆ. ಇದೇ ಮಾದರಿಯಲ್ಲಿ, ಕಾವೇರಿ ಆರತಿಯನ್ನು ಒಂದು ವಿಶ್ವಮಾನ್ಯ ಆಚರಣೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ಲಾನ್ ಮಾಡಿದ್ದು, ಕನ್ನಡಿಗರ ಪಾಲಿಗೆ ಅಪಾರ ಹೆಮ್ಮೆಯ ಸಂಗತಿಯಾಗಿದೆ. ಡಿಸಿಎಂ ಅವರ ಈ ನಿರ್ಧಾರವು ಇಡೀ ದೇಶದ ನದಿ ಸಂಸ್ಕೃತಿಯನ್ನು ಒಂದುಗೂಡಿಸುವ, ಸಾಂಸ್ಕೃತಿಕ ಸಮನ್ವಯದ ಸೇತುವೆಯನ್ನು ನಿರ್ಮಿಸುವ ಒಂದು ಶ್ರೇಷ್ಠ ಪ್ರಯತ್ನವಾಗಿದೆ.

ಇದೇ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 26 ರಿಂದ 30ರವರೆಗೆ ಐದು ದಿನಗಳ ಕಾಲ ಕೃಷ್ಣರಾಜ ಸಾಗರ (KRS) ಜಲಾಶಯದ ಬಳಿ ಈ ಭವ್ಯ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 26ರ ಸಂಜೆ 5 ಗಂಟೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಪವಿತ್ರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಐದು ದಿನಗಳ ಸಾಂಕೇತಿಕ ಶುಭಾರಂಭವು, ಮುಂದಿನ ದಿನಗಳಲ್ಲಿ ಕೆಆರ್‌ಎಸ್ ಅನ್ನು ವಾರಾಣಸಿಯಂತೆ ಪ್ರತಿದಿನ ಭಕ್ತರನ್ನು ಸೆಳೆಯುವ ನಿತ್ಯಾರತಿಯ ಪುಣ್ಯಕ್ಷೇತ್ರವಾಗಿ ಮಾರ್ಪಡಿಸುವ ಡಿಸಿಎಂ ಅವರ ದೃಢ ಸಂಕಲ್ಪದ ಮೊದಲ ಹೆಜ್ಜೆಯಾಗಿದೆ.

ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಹೊಸ ಆಯಾಮ

ಕಾವೇರಿ ಆರತಿ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಕರ್ನಾಟಕದ ಪ್ರವಾಸೋದ್ಯಮ, ಆರ್ಥಿಕತೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಒಂದು ಹೊಸ ಆಯಾಮವನ್ನು ತೆರೆಯಲಿದೆ.

ಜಾಗತಿಕ ಪ್ರವಾಸಿ ತಾಣವಾಗಿ ಕೆಆರ್‌ಎಸ್: ಕಾವೇರಿ ಆರತಿಯು ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸಲಿದೆ. ಇದು ಮೈಸೂರು ದಸರಾಗೆ ಮತ್ತೊಂದು ಆಕರ್ಷಣೆಯಾಗಿ, ದೇಶ-ವಿದೇಶದ ಪ್ರವಾಸಿಗರನ್ನು ಬೃಹತ್ ಪ್ರಮಾಣದಲ್ಲಿ ಕಾವೇರಿ ತೀರಕ್ಕೆ ಸೆಳೆಯಲಿದೆ. ಇದರಿಂದ ಮಂಡ್ಯ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಆರ್ಥಿಕತೆ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಹೊಸ ಚೈತನ್ಯ ಸಿಗಲಿದ್ದು, ಕನ್ನಡಿಗರ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗೆ ಹೊಸ ರಹದಾರಿಯಾಗಲಿದೆ.

ಪರಿಸರ ಜಾಗೃತಿ ಮತ್ತು ಜವಾಬ್ದಾರಿ: ನದಿ ಸಂರಕ್ಷಣೆಯ ಮಹತ್ವವನ್ನು ಸಾರುವ ಈ ಆರತಿಯು, ಪ್ಲಾಸ್ಟಿಕ್ ಮುಕ್ತ ಮತ್ತು ಪರಿಸರ ಸ್ನೇಹಿ ನಿಯಮಗಳೊಂದಿಗೆ ನಡೆಯುವ ಮೂಲಕ, ಇಂದಿನ ಅಗತ್ಯಕ್ಕೆ ತಕ್ಕಂತೆ ಆಧ್ಯಾತ್ಮಿಕ ಜವಾಬ್ದಾರಿಯನ್ನು ಎತ್ತಿಹಿಡಿಯಲಿದೆ. ಈ ಆಚರಣೆ ನದಿ ಸ್ವಚ್ಛತೆಯ ಕುರಿತು ಸಾಮೂಹಿಕ ಸಂಕಲ್ಪಕ್ಕೆ ವೇದಿಕೆಯಾಗಲಿದೆ. ಆಧ್ಯಾತ್ಮಿಕ ಶಕ್ತಿಯ ಕೇಂದ್ರ: ಆದಿಚುಂಚನಗಿರಿ, ಸುತ್ತೂರು, ಸಿದ್ಧಗಂಗಾ, ಮತ್ತು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠಗಳ ಪೀಠಾಧ್ಯಕ್ಷರಾದ ಪರಮಪೂಜ್ಯ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ನಡೆಯುವ ಈ ಆರತಿಯು, ಈ ಪ್ರದೇಶವನ್ನು ದಕ್ಷಿಣ ಭಾರತದ ಪ್ರಮುಖ ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿ ಪರಿವರ್ತಿಸಲಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿ, ಶ್ರಮ ಮತ್ತು ಅಚಲವಾದ ಇಚ್ಛಾಶಕ್ತಿಯ ಕಾರಣದಿಂದಾಗಿ, ಈ ಕಾವೇರಿ ಆರತಿಯು ಕೇವಲ ಐದು ದಿನಗಳ ಸಾಂಕೇತಿಕ ಆಚರಣೆ ಯಾಗಿ ಉಳಿಯದೆ, ನಾಡಿನ ಸಂಸ್ಕೃತಿ, ಭಕ್ತಿ, ಮತ್ತು ಅಭಿವೃದ್ಧಿಯ ಸಂಕೇತವಾಗಿ ಯುಗಯುಗಾಂತರಗಳ ಕಾಲ ಬೆಳಗಲಿ ಎಂಬುದು ನಮ್ಮೆಲ್ಲರ ಆಶಯ. ಈ ಮಹತ್ವದ ಆಚರಣೆಗೆ ಚಾಲನೆ ನೀಡಲು ಮುಂದಾದ ಡಿಸಿಎಂ ಅವರ ಪ್ರಯತ್ನಕ್ಕೆ ನಾಡಿನಾದ್ಯಂತ ಜನಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದು ದಕ್ಷಿಣ ಭಾರತದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.

-ಶ್ರೀನಾಥ್‌ ಜೋಶಿ, ಸಿದ್ದರ

Related Posts

Leave a Reply

Your email address will not be published. Required fields are marked *