ಎರಡು ಕುಟುಂಬಗಳ ನಡುವೆ ದೀರ್ಘ ಸಮಯದಿಂದ ನಡೆಯುತ್ತಿದ್ದ ಜಗಳ ಗುಂಡಿಕ್ಕಿ ಒಬ್ಬನ ಹತ್ಯೆಯೊಂದಿಗೆ ಅಂತ್ಯಗೊಂಡ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
52 ವರ್ಷದ ರತನ್ ಲೋಹಿಯಾ ಎಂಬಾತನ ಮೇಲೆ ಹಲವಾರು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ವೇಳೆ ದೇಹದಲ್ಲಿ 69 ಗುಂಡುಗಳು ಪತ್ತೆಯಾಗಿವೆ.
ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದು, ದೇಶದ ಹೊರಗೆ ಇರುವ ಗ್ಯಾಂಗ್ ಸ್ಟರ್ ಗಳಿಗೆ ಸುಪಾರಿ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನವೆಂಬರ್ 30ರಂದು ಮುಂಜಾನೆ ಕೆಲಸಕ್ಕಾಗಿ ರತನ್ ಲೋಹಿಯಾ ಮನೆಯಿಂದ ಹೊರಗೆ ಬಂದಾಗ ಸುತ್ತುವರಿದ ಗುಂಪು ಹಲವಾರು ಬಾರಿ ಗುಂಡು ಹಾರಿಸಿ ಪರಾರಿಯಾಗಿದೆ. ರತನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಲವಾರು ಖಾಲಿ ಶೆಲ್ ಹಾಗೂ 3 ತುಂಬಿದ ಕಾರ್ಟಿಜ್ ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿಯಲ್ಲಿ ಮುಂಜಾನೆ 6.30ಕ್ಕೆ ದಾಳಿ ಆಗಿರುವುದು ಕಂಡು ಬಂದಿದೆ.
ಮೇ 15ರಂದು ರಣಭೀರ್ ಲೋಹಿಯಾ ಅವರ ಪುತ್ರ ಅರ್ಜುನ್ ಅವರ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ರತನ್ ಪುತ್ರಿ ರಣಭೀರ್ ಕುಟುಂಬ ರತನ್ ಕೊಲೆ ಮಾಡುವುದಾಗಿ ಹಲವಾರು ಬಾರಿ ಜೀವ ಬೆದರಿಕೆ ಹಾಕಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಎರಡೂ ಕುಟಂಬಗಳ ನಡುವೆ ಹಲವಾರು ಸಮಯದಿಂದ ಜಗಳ ನಡೆಯುತ್ತಿದ್ದು, ಇದು ಮುಂದಿನ ತಲೆಮಾರಿಗೆ ಹೋಗುವ ಸಾಧ್ಯತೆ ಇದೆ ಎಂದು ಆಕೆ ಭೀತಿ ವ್ಯಕ್ತಪಡಿಸಿದ್ದಾರೆ.


