ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿ ಹೆಸರು ಕೇಳಿಬರುತ್ತಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಆರಂಭಗೊಂಡಿವೆ. ಈ ವಿಚಾರದಲ್ಲಿ ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ.
ಈ ಬಾರಿಯ ದಸರಾ ಮಹೋತ್ಸವವನ್ನು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾಂಧಿಯವರು ಉದ್ಘಾಟಿಸಲಿದ್ದಾರೆ ಎಂಬ ಕಾಲ್ಪನಿಕ ಸುದ್ದಿಯನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದು ಸತ್ಯಕ್ಕೆ ದೂರವಾದದ್ದು. ಆ ರೀತಿಯ ಉದ್ದೇಶವಾಗಲೀ, ಪ್ರಸ್ತಾವನೆಯಾಗಲಿ ಸರ್ಕಾರದ ಮುಂದೆ ಇಲ್ಲ ಎಂದು ಸಿಎಂ ಕಚೇರಿ ಹೇಳಿದೆ.
ದಸರಾವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಂದ ಉದ್ಘಾಟಿಸಲು ಸಿಎಂ ಸಿದ್ದರಾಮಯ್ಯ ಇಚ್ಛಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಖುದ್ದು ಸಿಎಂ ದೆಹಲಿಗೆ ತೆರಳಿ ಸೋನಿಯಾ ಅವರನ್ನು ಭೇಟಿ ಮಾಡಿ ಆಹ್ವಾನ ನೀಡುವ ಸಾಧ್ಯತೆಗಳಿವೆ ಎಂದು ಸುದ್ದಿಯಾಗಿತ್ತು. ಸೋನಿಯಾ ಗಾಂಧಿ ಉದ್ಘಾಟಿಸಲು ಅವರಿಗೇನು ಅರ್ಹತೆ ಇದೆ, ಮೈಸೂರು ದಸರಾಕ್ಕೂ ಅವರಿಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಕೇಳಿ ಬಂದಿವೆ. ಸಿಎಂ ಕಚೇರಿಯೇ ಸ್ಪಷ್ಟನೆ ನೀಡಿ ಊಹಾಪೋಹಗಳಿಗೆ ತೆರೆ ಎಳೆದಿದೆ.
ದಸರಾ ಹಬ್ಬವನ್ನು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಗುತ್ತದೆ. ಕಲೆ ,ಸಾಹಿತ್ಯ ಮತ್ತು ಕಲಾವಿದರು ಹಾಗೂ ರಾಷ್ಟಪತಿಗಳು ಸೇರಿಂದತೆ ಅನೇಕ ಗಣ್ಯರು ಉದ್ಘಾಟನೆ ಮಾಡಿದ್ದಾರೆ. 2021 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜು ಬೊಮ್ಮಾಯಿ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರಿಗೆ ದಸರಾ ಉದ್ಘಾಟನೆಗೆ ಆಹ್ವಾನವನ್ನು ನೀಡಿದ್ದರು. ಇದರೊಂದಿಗೆ ರಾಜಕೀಯ ಕ್ಷೇತ್ರದಿಂದ ಗಣ್ಯರು ಒಬ್ಬರು ಪ್ರಥಮ ಬಾರಿಗೆ ಮೈಸೂರು ದಸರಾವನ್ನು ಉದ್ಘಾಟಿಸಿದ್ದರು.
ದಸರಾ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ಮಾಡಿ ಒಂದು ಸಮಿತಿಯನ್ನು ಮಾಡಿ ಒಂದಷ್ಟು ಅನುದಾನ ಕೊಡುತ್ತಾರೆ.ಹೇಗೆಲ್ಲಾ ಕಾರ್ಯಕ್ರಮ ರೂಪಿಸಬೇಕೆಂದು ಸಮಿತಿ ಸಭೆ ಮಾಡಿ ತೀರ್ಮಾನ ಕೈಗೊಳ್ಳುತ್ತೆ. ದಸರಾ ಉದ್ಘಾಟಕರ ಆಯ್ಕೆ ಮಾಡುವುದು ರಾಜ್ಯದ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ. ಸೆಪ್ಟಂಬರ್ 22 ರಿಂದ ಅಕ್ಟೋಬರ್ 2ರವರೆಗೆ ದಸರಾ ನಡೆಯಲಿದ್ದು, ಈಗಾಗಲೇ ಮೈಸೂರಿನಲ್ಲಿ ಸಿದ್ಧತೆಗಳು ಬಿರುಸಿನಿಂದ ಸಾಗಿದೆ. ಈ ಬಾರಿ ಮೈಸೂರು ದಸರಾವನ್ನು ಯಾರು ಉದ್ಘಾಟನೆ ಮಾಡುತ್ತಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.