ಮಂಡ್ಯದ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗನೊಬ್ಬ ಇನ್ನಷ್ಟು ಆಸ್ತಿ ಪಡೆದುಕೊಳ್ಳುವುದಕ್ಕಾಗಿ ತಂದೆಗೆ ಬ್ಲ್ಯಾಕ್ಮೇಲ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಗನ ವಿರುದ್ಧ ತಂದೆ ದೂರು ನೀಡಿದ್ದು, ಬೆದರಿಕೆ ಹಾಕಿದ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಎಂಬವರು ರಾಣಿ ಐಶ್ವರ್ಯ ಡೆವಲಪರ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಾರೆ. ಇವರ ಮಗ ಪ್ರಣವ್ (25) ಈಗಾಗಲೇ ತಂದೆಯ ಕೋಟ್ಯಾಂತರ ರೂ. ಕಳೆದು ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ತಂದೆ ಹಣ ಕೊಡದಿದ್ದಾಗ ಕೆಲವರ ಜೊತೆ ಸೇರಿ ಅಪ್ಪನನ್ನು ಹೆದರಿಸಿ ಹಣ ಕಿತ್ತುಕೊಳ್ಳುವ ಪ್ಲಾನ್ ಮಾಡಿದ್ದಾನೆ. ತಂದೆಯ ಭಾವಚಿತ್ರಕ್ಕೆ ಅಶ್ಲೀಲ ಚಿತ್ರ ಹಾಗೂ ವಾಯ್ಸ್ ಎಡಿಟ್ ಮಾಡಿ ವಾಟ್ಸಾಪ್ ಗ್ರೂಪ್ಗೆ ಹಾಕಿ ಬ್ಲ್ಯಾಕ್ಮೇಲ್ ಮಾಡಿ ಹಣ ನೀಡುವಂತೆ ಬೆದರಿಸಿದ್ದ.
ಮಗನಿಗೆ ಪ್ರಚೋದಿಸಿದವರು ಸೇರಿ ಮಗನ ವಿರುದ್ಧ ಮದ್ದೂರು ಪೊಲೀಸರಿಗೆ ತಂದೆ ದೂರು ನೀಡಿದ್ದು, ಆರೋಪಿಗಳಾದ ಮಗ ಪ್ರಣವ್, ಮಹೇಶ್, ಈಶ್ವರ್, ಪ್ರೀತಮ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ದುಶ್ಚಟಗಳಿಗೆ ಬಲಿಯಾಗಿ ಇತರರ ಜೊತೆ ಸೇರಿ ಆಸ್ತಿಗಾಗಿ ತಂದೆಯನ್ನೇ ಟ್ರ್ಯಾಪ್ ಮಾಡಲು ಹೋಗಿ ಮಗ ತಾನೇ ಸಿಕ್ಕಿ ಹಾಕಿಕೊಂಡಿದ್ದಾನೆ.