ಉತ್ತರಪ್ರದೇಶದ ಮೀರತ್ನಲ್ಲಿ ಯುವಕನೊಬ್ಬ ತಂದೆಯನ್ನು ಗುಂಡಿಕ್ಕಿ ಕೊಂದು ತುಂಡು ಮಾಡಿ ದೇಹದ ಭಾಗಗಳನ್ನು ವಿಲೇವಾರಿ ಮಾಡಿರು ಪ್ರಕರಣವೊಂದು ಬಯಲಾಗಿದೆ.
ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಶುಕ್ರವಾರದಿಂದ ನಾಪತ್ತೆ ಎಂದು ದೂರು ದಾಖಲಾಗಿತ್ತು. ಅವರ ಮನೆಗೆ ಭೇಟಿ ನೀಡಿದ್ದ ಪೊಲೀಸರಿಗೆ ಬ್ಯಾರೆಲ್ನಲ್ಲಿ ದೇಹದ ಭಾಗಗಳು ಪತ್ತೆಯಾಗಿವೆ. ಮಗ ಅಕ್ಷತ್ನ ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಶವವನ್ನು ತುಂಡು ಮಾಡಿ ವಿಲೇವಾರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ನೀಟ್ ಪರೀಕ್ಷೆಗೆ ತಯಾರಿ ನಡೆಸುವಂತೆ ತನ್ನ ತಂದೆಯಿಂದ ಒತ್ತಡ ಇತ್ತು. ಬೈಯುವುದು ಹೆಚ್ಚಾಗಿ ಮನೆಯಲ್ಲಿ ಜಗಳಗಳು ನಡೆದಿತ್ತು. ಫೆಬ್ರವರಿ 20 ರಂದು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ತಂದೆ ಮತ್ತು ಮಗನ ನಡುವೆ ಜಗಳ ನಡೆದಿತ್ತು. ಕೋಪದ ಭರದಲ್ಲಿ ಮಗ ತಂದೆಗೆ ರೈಫಲ್ನಿಂದ ಗುಂಡು ಹಾರಿಸಿ ಕೊಂದಿದ್ದ. ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಸ್ಥಳಾಂತರಿಸಿ ಸಾಕ್ಷ್ಯ ನಾಶಮಾಡಲು ಪ್ರಯತ್ನಿಸಿದ್ದ.
ಮನ್ವೇಂದ್ರ ಸಿಂಗ್ ತನ್ನ ಮಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿ ಮುಂದುವರಿಸಬೇಕೆಂದು ಬಯಸಿದ್ದರು. ಈ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಮಗ ಒಮ್ಮೆ ಮನೆಯಿಂದ ಓಡಿಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿ ಮುಂದೆಯೇ ತಂದೆಯ ದೇಹವನ್ನು ತುಂಡರಿಸಿದ್ದ ಆತ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ದೇಹದ ಭಾಗಗಳನ್ನು ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಮಾಡಿ ವಿಲೇವಾರಿ ಮಾಡಿದ್ದ. ಕೆಲವು ಭಾಗಗಳನ್ನು ಮೊನೆಯೊಳಗೆ ಇಟ್ಟಿದ್ದ ನೀಲಿ ಡ್ರಮ್ನಲ್ಲಿ ಹಾಕಿದ್ದ ಎಂಬುದು ಪತ್ತೆಯಾಗಿದೆ. ಘಟನೆ ನಡೆದ ಸಮಯದಲ್ಲಿ ಮನ್ವೇಂದ್ರ ಸಿಂಗ್ ಅವರ ಪತ್ನಿ ಗ್ರಾಮದಲ್ಲಿದ್ದರು, ಅವರ ಮಗಳು ಮನೆಯಲ್ಲಿದ್ದರು. ಪೊಲೀಸರು ಆರೋಪಿ ಅಕ್ಷತ್ನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಿದ್ದಾರೆ.


