ನಲ್ವತ್ತು ವರ್ಷ ಆಗಿದ್ದರೂ ಮದುವೆ ಮಾಡಿಸಿಲ್ಲವೆಂದು ಮಗನೊಬ್ಬ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ. ಗಂಗಮ್ಮ (65) ಕೊಲೆಯಾದ ಮಹಿಳೆ, ಉಮಾಶಂಕರ್ (40) ತಾಯಿಯನ್ನು ಕೊಲೆ ಮಾಡಿದ ಮಗ.
ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಾಸ್ ಆಗುವಾಗ ನಡೆದ ಅಪಘಾತದಲ್ಲಿ ಆರೋಪಿ ಉಮಾಶಂಕರ್ ತಲೆಗೆ ಪೆಟ್ಟು ಬಿದ್ದಿತ್ತು. ಇದರಿಂದ ಒಮ್ಮೊಮ್ಮೆ ಬುದ್ದಿ ಭ್ರಮಣೆಯಾದವನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ಮದುವೆ ಮಾಡಿಸುವಂತೆ ತಾಯಿ ಜೊತೆ ಜಗಳವಾಡುತ್ತಿದ್ದ. ಮಾರ್ಚ್ 26 ರಂದು ತಾಯಿ ಗಂಗಮ್ಮರೊಂದಿಗೆ ಮದುವೆ ವಿಚಾರಕ್ಕೆ ಜಗಳ ತೆಗೆದಿದ್ದ. ಮಾತಿಗೆ ಮಾತು ಬೆಳೆದು ಮೊದಲು ಕೈನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಕುಸಿದು ಬಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಾ.30 ರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಶ್ರವಣಬೆಳಗೊಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ಬಸ್ಗೆ ಬೈಕ್ ಡಿಕ್ಕಿ ಹೊಡೆಸಿ ಯುವಕ ಆತ್ಮಹತ್ಯೆ
ಪ್ರೇಮ ವೈಫಲ್ಯದಿಂದ ನೊಂದ ಯುವಕ ಬಸ್ಗೆ ಬೈಕ್ ಡಿಕ್ಕಿ ಹೊಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್ಗೇಟ್ ಬಳಿ ನಡೆದಿದೆ. ಸಿಂದಗಿ ಪಟ್ಟಣದ ಅಲ್ಲಾಪುರ ಲೇಔಟ್ನ ಯವಕ ಅಭಿಷೇಕ ಸೈಬಗೌಡ ನಾಗರಳ್ಳಿ (19) ಮೃತಪಟ್ಟವ.
ಕನ್ನೊಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದ ಸರ್ಕಾರಿ ಬಸ್ಗೆ ಮೃತ ಅಭಿಷೇಕ ಬೈಕ್ನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಬೈಕ್ಗೆ ಬೆಂಕಿ ಹೊತ್ತಿಕೊಂಡು ಬಸ್ಸಿಗೂ ಆವರಿಸಿಕೊಂಡಿದೆ. ಬೈಕ್ ಸವಾರ ಸಜೀವ ದಹನವಾಗಿದ್ದಾನೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಮೃತ ಅಭಿಷೇಕ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ. ಇಂದು ಮಧ್ಯಾಹ್ನದ ಹೊತ್ತಿಗೆ ನಾನು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತೇನೆ. ಅವಳು ನನಗೆ ಬೇಕು, ನನ್ನಿಂದ ಅವಳನ್ನು ದೂರ ಮಾಡಿದವರೇ ನನ್ನ ಸಾವಿಗೆ ಕಾರಣ ಎಂದು ಮೂವರ ಹೆಸರನ್ನು ಉಲ್ಲೇಖಿಸಿದ್ದಾನೆ. ಸ್ಥಳಕ್ಕೆ ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿಸಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


