ಬುದ್ದಿವಾದ ಹೇಳಿದ ತಂದೆಯನ್ನೇ ಚಾಕುವಿನಿಂದ ಇರಿದು ಪಾಪಿ ಮಗ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬ್ಯಾಡರಹಳ್ಳಿಯ ತಿಗಳರಪಾಳ್ಯದ ಕೆರೆಯ ಮುನೇಶ್ವರ ದೇವಸ್ಥಾನದ ಬಳಿ ಸೋಮವಾರ ಈ ಘಟನೆ ನಡೆದಿದ್ದು, ಮಾಜಿ ಸೈನಿಕ ಚನ್ನಬಸಪ್ಪ (61) ಅವರನ್ನು ಮಗ ಅಮಿತ್ [21] ಕೊಲೆ ಮಾಡಿದ್ದಾನೆ.
ನಿವೃತ್ತಿ ಬಳಿಕ ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಚನ್ನಬಸಪ್ಪ ಕೆಲಸಕ್ಕೆ ಹೋಗದೇ ಮದ್ಯ ಹಾಗೂ ಮಾದಕ ವಸ್ತುವಿನ ದಾಸನಾಗಿದ್ದ ಮಗ ಅಮಿತ್‌ಗೆ ಬುದ್ದಿವಾದ ಹೇಳುತ್ತಿದ್ದರು.
ಇದೇ ವಿಚಾರವಾಗಿಯೂ ಪ್ರತಿ ದಿನ ಅಪ್ಪ ಮಗನ ನಡುವೆ ಗಲಾಟೆ ನಡೆಯುತ್ತಿತ್ತು. ಸೋಮವಾರ ಸಂಜೆ ಇದೇ ವಿಚಾರಕ್ಕೆ ಮತ್ತೆ ಗಲಾಟೆ ಶುರುವಾಗಿದೆ. ಒಳ್ಳೆಯ ಬಟ್ಟೆ ಹಾಕಿಕೊಂಡು ಕೆಲಸಕ್ಕೆ ಹೋಗು ಎಂದು ಚನ್ನಬಸಪ್ಪ ಹೇಳಿದಾಗ ಕೋಪಗೊಂಡು ಎದೆಗೆ ಚಾಕುವಿನಿಂದ ಮಗ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಸುತ್ತಿದ್ದ ಚನ್ನಬಸಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ನಶೆಯಲ್ಲಿದ್ದ ಆರೋಪಿ ಅಮಿತ್ ನನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.