ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದು, ಪತಿಯ ಶವದದೊಂದಿಗೆ ಮಾನಸಿಕ ಅಸ್ವಸ್ಥ ಪತ್ನಿ 10 ದಿನ ಕಳೆದಿದ್ದಾರೆ. ಪತಿ ಸತ್ತಿರುವುದೇ ಪತ್ನಿಗೆ ತಿಳಿದಿಲ್ಲ.
77 ವರ್ಷದ ಸಿರಿಲ್ ಮೋನಿಸ್ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಮಾನಸಿಕ ಅಸ್ವಸ್ಥ ಪತ್ನಿಯು ಪತಿ ಬದುಕಿದ್ದಾರೆ, ಮಲಗಿದ್ದಾರೆಂದೇ ಭಾವಿಸಿ ಶವದ ಪಕ್ಕದಲ್ಲೇ 10 ದಿನ ಕಳೆದಿದ್ದಾರೆ.
ಮೃತ ಮೋನಿಸ್ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದನಂತೆ. ತಾಯಿ ‘ಅಪ್ಪ ಚೆನ್ನಾಗಿದ್ದಾರೆ, ಮಲಗಿದ್ದಾರೆ’ ಎಂದೇ ಹೇಳುತ್ತಿದ್ದರಂತೆ. ಹತ್ತು ದಿನಗಳು ಕಳೆದಿದ್ದರಿಂದ ಮೋನಿಸ್ ಮೃತದೇಹ ಸಂಪೂರ್ಣ ಕೊಳೆತು ಹುಳ ಹಿಡಿದಿತ್ತು. ಆ ಮನೆಯಿಂದ ವಿಪರೀತ ವಾಸನೆ ಬರಲಾರಂಭಿಸಿದಾಗ ಸಂಶಯಗೊಂಡ ಪಕ್ಕದ ನಿವಾಸಿಗಳು ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ .’ನನ್ನ ಗಂಡ ನನಗೆ ಬೇಕು, ಅವರನ್ನು ಎಲ್ಲಿಗೂ ಕೊಂಡೊಯ್ಯಬೇಡಿ’ ಸತ್ತ ಪತಿಯ ಶವವನ್ನು ಯಾರೂ ಮುಟ್ಟದಂತೆ ಪತ್ನಿ ಹಟ ಹಿಡಿದಿದ್ದಾರೆ. ನನ್ನ ಪತಿ ಆರಾಮ ಇದ್ದಾರೆ, ಏನೂ ಆಗಿಲ್ಲ ಎನ್ನುತ್ತಿದ್ದರು. ಶವವು ಸಂಪೂರ್ಣ ಕೊಳೆತು ಹುಳು ಹಿಡಿದು ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಮುಟ್ಟಲು ಕೂಡ ಬರಲಿಲ್ಲ. ಸಮಾಜ ಸೇವಕ ಆರೀಫ್ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದರು.
ಹದಿನೈದು ದಿನಗಳ ಹಿಂದೆ ಮನೆಗೆ ಬಂದು ಹೋಗಿದ್ದ ಮಗ ‘ಅಪ್ಪ ಆರಾಮಿದ್ದಾರೆ’ ಎನ್ನುವ ತಾಯಿಯ ಮಾತು ಕೇಳಿ ಮತ್ತೆ ಬಂದಿರಲಿಲ್ಲ. ಅಪ್ಪನ ಸಾವಿನ ಸುದ್ದಿ ತಿಳಿದು ಬಂದರೂ ಶವ ಸಂಪೂರ್ಣ ಕೊಳೆತುಹೋಗಿದ್ದರಿಂದ ಅಪ್ಪನ ಮುಖ ನೋಡುವುದಕ್ಕೂ ಆಗಿಲ್ಲ. ದುಬೈನಿಂದ ಮಗಳುಬರಲಾಗಲಿಲ್ಲ. ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಮೋನಿಸ್ ಅಂತ್ಯಸಂಸ್ಕಾರ ನೆರವೇರಿಸಲಾಯಿತು.


