ಸುಧಾರಣೆಗೆ ನೆಲಮೂಲದ ವಿವೇಕ ಬೇಕು. ಸಾಮಾಜಿಕ ಸಂವೇದನೆಯೂ ಬೇಕು. ಇವೆರಡು ಏಕೀಭವಿಸಿದಾಗ ಚಳುವಳಿಗೆ ಬೀಜವಾಗಿ ಮಾರ್ಪಡುತ್ತವೆ, ಕ್ರಾಂತಿಗೆ ಮುನ್ನುಡಿ ಬರೆಯುತ್ತವೆ. ಈ ವಿವೇಕ ಮತ್ತು ಸಂವೇದನೆಯನ್ನು ಒಟ್ಟಾಗಿಸಿ ಸಾಮಾಜಿಕ ಸುಧಾರಣೆಗಾಗಿಯೇ ನಡೆನುಡಿಯನ್ನು ರೂಪಿಸಿಕೊಂಡ ತಲೆಮಾರಿಗೇನು ಕಡಿಮೆ ಇಲ್ಲ. ಸಾಮಾನ್ಯವಾಗಿ ನಾವು ಬುದ್ಧನಿಂದ ಹಿಡಿದು ಬಾಬಾ ಸಾಹೇಬ ಅಂಬೇಡ್ಕರರವರೆಗೆ ಎಂಬ ಎರಡು ದಡಗಳನ್ನು ಗುರುತಿಸುವುದುಂಟು. ಆ ಎರಡು ಧ್ರುವಗಳ ಮಧ್ಯೆ ಬಸವಣ್ಣ ಮತ್ತು ಶರಣರು, ದಾಸರು, ಸಂತರು ಹೀಗೆ ಅಸೀಮಾ ಸುಧಾರಣಾ ಕಾವುಗಳು ಹಾದು ಹೋಗಿವೆ. ವಿವೇಕ, ಅರಿವು, ಪ್ರಜ್ಞೆ, ಪರಿವರ್ತನೆಯಂತಹ ನೀರಿನ ತೊರೆಗಳು ಹರಿದಿವೆ. ಅವುಗಳ ಪಾತ್ರ ವೈವಿಧ್ಯ ಮತ್ತು ವಿಭಿನ್ನ. ಹೇಗೆ?
ಒಂದು ಯುಗದ ಬೀಜ, ಹುಟ್ಟು ಹಾಕುವ ಸಂಘರ್ಷಕ್ಕೆ ಮತ್ತು ಸವಾಲುಗಳಿಗೆ ಎದೆ ನೀಡಿ ರೂಪಿಸಿದ ನೆಲೆಗಳ ಮೂಲಕ ಜೀವಂತವಾಗಿರುವರು. ಉದಾಹರಣೆ ಬುದ್ಧನ ಕಾರುಣ್ಯ, ಬಸವಣ್ಣನವರ ಕಾಯಕ ಮಾದರಿ, ಬಾಬಾ ಸಾಹೇಬ ಅಂಬೇಡ್ಕರ್ ಅವರ ಅಸ್ಪೃಶ್ಯತಾ ವಿರೋಧಿ ಚಳುವಳಿ. ಇಂತಹ ಮಾದರಿಗಳು ನಮ್ಮಲ್ಲಿ ನಿರಂತರವಾಗಿ ಸಾಗಿ ಬಂದಿವೆ. ಆಯಾಯ ಕಾಲಘಟ್ಟದಲ್ಲಿ ಕಾಡಿದ, ಕಾಡುತ್ತಲೇ ಬರುವ ಸಮಸ್ಯೆಗಳಿಗೆ ರೂಪಿಸುವ ಪ್ರತಿರೋಧ ಮತ್ತು ಪರಿಹಾರಗಳ ಮೂಲಕ ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ಹಿಡಿದಿಟ್ಟಿರುತ್ತವೆ. ಹಾಗಾಗಿಯೇ 12ನೇ ಶತಮಾನದ ಕಾಲಘಟ್ಟವಂತೂ ಸಾಲು ಸಾಲು ಹೈ ಮಾಸ್ಟ್ ಬೆಳಕಾಗಿ ನಿಂತಿದ್ದರು, ನಿಲ್ಲುತ್ತಾರೆ, ನಿಲ್ಲುವರು.
ಚಳುವಳಿಗೆ ಹದವಾದ ನೆಲವಿದು. ಇಲ್ಲಿನ ಬೀಜಗಳು ಸದೃಢವಾಗಿವೆ. ಉತ್ತುವ ಬೇಸಾಯಗಾರರು ಬೇಕಷ್ಟೆ. ಸೋತರೂ ಧೃತಿಗೆಡದೆ ಮತ್ತೆ ಮತ್ತೆ ಬಿತ್ತುವ ಪ್ರಕ್ರಿಯೆ ಮಾತ್ರ ನಿಂತಿಲ್ಲ. ವಚನಕಾರರು ಉತ್ತಮ ಬೇಸಾಯಗಾರರು. ಅನಂತರದ ಕಾಲಮಾನಗಳಲ್ಲಿ ಅವರ ದಾರಿ ಹಿಡಿದು ಬೆಳಕಾದವರು ಇರುವುದುಂಟು. ಆ ಹುಡುಕಾಟದಲ್ಲಿ ಡಾ. ಮಹಾಂತ ಶಿವಯೋಗಿ ಸ್ವಾಮಿಗಳು ವಚನ ಪರಂಪರೆಯ ಜಾತ್ಯತೀತ ಪರಿಕಲ್ಪನೆಯ ಮರು ಸೃಷ್ಟಿಯ ರೂಪವಾಗಿ ಕಾಣಿಸುತ್ತಾರೆ. ೧೯೩೦, ಆಗಸ್ಟ್, ೦೧ ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಹಿಪ್ಪರಗಿಯಲ್ಲಿ ಜನಿಸಿದರು. ಹತ್ತನೇ ವಯಸ್ಸಿನಲ್ಲಿ ಸವದಿಯ ವಿರಕ್ತ ಮಠದ ಕಿರಿಯ ಸ್ವಾಮಿಯಾಗಿ, ೧೯೭೦ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ೧೯ನೇ ಪೀಠಾಧಿಕಾರಿ. ಅಲ್ಲಿಂದ ೨೦೧೮ ರವರೆಗೆ ಅಂದರೆ ೪೮ ವರ್ಷಗಳ ಅನುಪಮ ಸೇವೆ ಹಲವು ದಿಕ್ಸೂಚಿಗಳ ರಾಡರ್ ಆಗಿ ಕೆಲಸ ಮಾಡಿದ್ದಾರೆ. ಶರಣ ತತ್ವಗಳ ಆಕರ್ಷಣೆ; ಸಾಮಾಜಿಕ ಸ್ವಾಸ್ಥ್ಯದ ಗುರುತ್ವ. ಇದೇ ಅವರ ವ್ಯಕ್ತಿತ್ವದ ಗುರುತ್ವಾಕರ್ಷಣೆ!
ಅವರ ದೃಷ್ಟಿ ಮತ್ತು ದಿಕ್ಕು ಮತ್ತೊಂದು ಬಗೆಯದು. ಕಾಯಕ, ದಾಸೋಹ ಜೊತೆಗೆ ‘ಜೋಳಿಗೆ ಕಾರ್ಯಕ್ರಮ’ ೧೯೭೫ರಲ್ಲಿ ಪರಿಚಯಿಸಿದ ವಿಶಿಷ್ಟ ಚಳವಳಿಯ ಮಾದರಿ. ಯುವಕರಲ್ಲಿ ಹೊಸ ಭರವಸೆಯನ್ನು ಕಟ್ಟುವ ಮತ್ತು ಕಾಣುವ ಚಿಂತನೆ. ಈ ಜೋಳಿಗೆಯ ಉದ್ದೇಶ ಅನ್ನಕ್ಕಾಗಿಯೋ, ದಾನಕ್ಕಾಗಿಯೋ, ಮಠದ ಆಸ್ತಿಯನ್ನು ಹೆಚ್ಚಿಸುವ ಸಲುವಾಗಿಯೂ ಅಲ್ಲ. ದುಶ್ಚಟಕ್ಕೆ ಯುವಕರನ್ನು ಈಡು ಮಾಡುವ ಗುಟುಕಾ, ಸಿಗರೇಟ್, ಸೇರೆ ಬಾಟಲಿಗಳನ್ನು ಬಟ್ಟೆ ಚೀಲದ ಜೋಳಿಗೆಗೆ ಹಾಕಿಸಿಕೊಂಡು ಅವರಿಗೆ ಪ್ರಮಾಣ ಬೋಧಿಸಿ, ವ್ಯಸನ ಮುಕ್ತ ಚಿಂತನೆಗೆ, ಮನ:ಪರಿವರ್ತನೆ ಮಾಡಲು ಮುಂದಾದರು. ಇದೊಂದು ಬಗೆಯ ಸಮಾಜದಲ್ಲಿನ ಯುವಕರ ಆರೋಗ್ಯ ಜೋಳಿಗೆ ಹಿಡಿದವರು ಎಂದರೂ ಉತ್ಪ್ರೇಕ್ಷಿತವಲ್ಲ. ಬೇಡಲು ಬಂದಿಹನು ದುಶ್ಚಟಗಳ ವಿರೋಧಿ ದಾಸಯ್ಯ ಎಂದರೂ ತಪ್ಪಾಗಲಿಕ್ಕಿಲ್ಲ!. ಈ ಕ್ರಿಯೆ ಸಾಮಾನ್ಯವಾದುದ್ದಲ್ಲ. ಸಾಮಾನ್ಯರಲ್ಲಿಯೇ ತರುವ ಬದಲಾವಣೆ! ಇಂತಹ ಆಲೋಚನೆ ಯಾಕೆ ಬಂತು? ಪ್ರೇರಣೆ ಏನು? ಯಾವುದೂ ಏಕಾಏಕಿ ಸಂಭವಿಸುವುದಿಲ್ಲ. ಪರಿಸರವೋ? ವ್ಯವಸ್ಥೆಯೋ? ಘಟನೆಯೋ? ಬಡಿದೆಬ್ಬಿಸಿರಬೇಕು. ಇಲ್ಲವೇ ದೂರದೃಷ್ಟಿಯು ಕಾರಣವಾಗಿರಬೇಕು. ಸಾಮಾಜಿಕ ಚಿಕಿತ್ಸಕರಾದವರು ಸಾಮಾಜಿಕ ರೋಗವನ್ನು ಅರ್ಥಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿಯ ವಿಪ್ಲವಕಾರಿ ಆಲೋಚನೆಗೆ ಒಂದು ಸಣ್ಣ ಸಂಗತಿ ಸಾಕು. ಆ ಸಂಗತಿ ಬದುಕಿನ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇಲ್ಲದಿಲ್ಲ. ಒಮ್ಮೆ ಕುಡಿತದ ಚಟದಿಂದ ದಲಿತ ಯುವಕನ ಸಾವು ಕೇಳಿ, ಕೇರಿ ಪ್ರವೇಶಿಸಿ(ದಲಿತ ಕೇರಿಗೆ ಪ್ರವೇಶಿಸಿದ ಮೊದಲ ಸ್ವಾಮಿ ಎಂಬುದು) ಆತನ ತಂದೆ ತಾಯಿಯರ ಉಪವಾಸದ ಸ್ಥಿತಿ ಕಂಡು ಮಮ್ಮುಲರಾದರು. ಈ ತಿಳುವಳಿಕೆಯಾನ ಜಾತಿ, ಮತ, ಪಂಗಡ, ಭಾಷೆ, ಧರ್ಮ, ದೇಶ ಎನ್ನದೆ ಗಡಿ ದಾಟಿಸಿತು. ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲೂ ಮಹಾಂತ ಜೋಳಿಗೆ ನಾಡಾಡಿ ಆಯಿತು. ಅಷ್ಟೇ ಅಲ್ಲ ಅನ್ನದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿ ಮಕ್ಕಳಿಗೆ ಟ್ರಸ್ಟ್, ಮಠದ ಭೂಮಿಯನ್ನು ರೈತರಿಗೆ ಹಂಚಿದ್ದು ಇವೆಲ್ಲವೂ ಮಹತ್ಕಾರ್ಯಗಳೇ. ಶರಣರ ಸಾವು ಮರಣದಲ್ಲಿ ನೋಡು ಎಂಬಂತೆ ಇವರ ಈ ಸೇವೆಗೆ ರಾಜ್ಯ ಸರ್ಕಾರ ಆಗಸ್ಟ್ ಒಂದನೇ ತಾರೀಕನ್ನು ‘ವ್ಯಸನ ಮುಕ್ತ ದಿನ’ವೆಂದು ಸಂತನ ಜೋಳಿಗೆಯನ್ನು ಗೌರವಿಸಿದೆ. ಅತ್ಯಂತ ವಿಷಾದದ ಸಂಗತಿ ಎಂದರೆ, ಹೆಚ್ಚು ಕಡಿಮೆ ಪ್ರತಿ ಹಳ್ಳಿಗಳಲ್ಲಿಯೂ ಒಂದೊಂದು ಬಾರ್ ಇರುವುದು ನೋವಿನ ಸಂಗತಿ.
ಶರಣರ ನಡೆನುಡಿಯಂತೆ ದಲಿತರನ್ನು ಅಪ್ಪಿದ್ದು ಮತ್ತು ಒಪ್ಪಿದ್ದು 12ನೇ ಶತಮಾನದ ನಂತರದ ಇವರದು ಒಂದು ಕ್ರಾಂತಿಕಾರಿ ನಡೆಯೇ. ಮಠಗಳು ಧರ್ಮ ಜಾತಿ ರಾಜಕಾರಣದ ಶಕ್ತಿ ಕೇಂದ್ರಗಳೆಂಬ ಅಪವಾದಕ್ಕೆ ಹೊರತಾದ ಇವರು ದಲಿತ ವ್ಯಕ್ತಿಗಳನ್ನು ಪೀಠಾಧಿಕಾರಿಗಳನ್ನಾಗಿ ಮಾಡಿದ್ದು ಶರಣರ ನಡೆಯ ಹೆಗ್ಗುರುತು ಹಾಗೂ ಮೈಲುಗಲ್ಲು. ಸಮರ್ಥನೆ ಎಂಬಂತೆ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಮಠ ಇದಕ್ಕೆ ಸಾಕ್ಷಿ.
ಇವರಂತೆಯೇ ಸಾಮಾಜಿಕ ಕಳಕಳಿ ಮತ್ತು ಕಾಳಜಿ ಹೊತ್ತ ಮತ್ತೋರ್ವರಾದ ಬಬಲೇಶ್ವರದ ಶ್ರೀ ಶಾಂತವೀರ ಸ್ವಾಮಿಗಳು ಕೂಡ ಒಬ್ಬರು. ಇಬ್ಬರದು ಸಾಮಾಜಿಕ ದೃಷ್ಟಿಯೇ. ಅವರದು ದುಶ್ಚಟದ ವ್ಯಸನದ ಬಗ್ಗೆ ಚಿಂತಿತರಾದರೆ, ಇವರು ವೇಶ್ಯ ಪದ್ಧತಿಯ ವಿರೋಧಿ ಕ್ರಾಂತಿ ಎಬ್ಬಿಸಿದರು. ದಾರಿಗಳು ಬೇರೆಯಾದರು ಸಂಧಿಸುವ ಗಮ್ಯಸ್ಥಾನ ಒಂದೆ, ಗಮನವು ಒಂದೇ. ಮ.ಗು. ಬಿರಾದಾರ ಅವರು ತಮ್ಮೂರಿನ ಬಬಲೇಶ್ವರದ ಶ್ರೀ ಶಾಂತವೀರ ಸ್ವಾಮಿಗಳು ಬಗ್ಗೆ ಒಂದು ಘಟನೆಯನ್ನು ಹೇಳುತ್ತಾರೆ; “ಅವರದು ಜಾತ್ಯಾತೀತ ವ್ಯಕ್ತಿತ್ವ. ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಆ ಊರಿನ ಎಲ್ಲಾ ವರ್ಗದ ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿದ್ದರು. ವಿದ್ಯಾರ್ಥಿಗಳನ್ನು ದಲಿತರ ಕೇರಿಗೆ ಕರೆದುಕೊಂಡು ಹೋಗಿ, ಜನಜಾಗೃತಿ ಮೂಡಿಸುತ್ತಿದ್ದರು. ವೇಶ್ಯ ಪದ್ದತಿ ವಿರುದ್ಧ ಕರೆಕೊಟ್ಟು ಹೆಣ್ಣುಮಕ್ಕಳಿಗೆ ತಿಳುವಳಿಕೆ ನೀಡುತ್ತಿದ್ದರು. ಮುಂಬೈಯಲ್ಲಿ ವೇಶ್ಯೆಯಾಗಿದ್ದ ಆ ಊರಿನ ಕೆಂಚವ್ವ ತನ್ನ ಮುಪ್ಪಿನ ಕಾಲಕ್ಕೆ ಊರಲ್ಲಿ ಬಂದು ನೆಲೆಸಿದ್ದರು. ಆಕೆ ಒಮ್ಮೆ ಸ್ವಾಮಿಯ ಬಳಿ ಬಂದು, ‘ನನಗೆ ಯಾರು ಇಲ್ಲ ಅನಾಥೆ. ನಾನು ಸಂಪಾದನೆ ಮಾಡಿರುವ ಈ ಹಣವನ್ನೆಲ್ಲ ಮಠಕ್ಕೆ ಒಪ್ಪಿಸುತ್ತೇನೆ ಎಂದಳು. ಆ ಮಾತಿಗೆ ಸ್ವಾಮಿಗಳು ‘ಕೆಂಚವ್ವ, ನೀನು ಅನಾಥಳಲ್ಲ. ಇಲ್ಲಿ ಓದುವ ಮಕ್ಕಳು ನಿನ್ನ ಮಕ್ಕಳೆ ಎಂದುಕೋ’ ಎಂದು ಹೇಳಿ ಆಕೆ ನೀಡಿದ ಮೂವತ್ತು ಸಾವಿರ ಹಣವನ್ನು ಶಾಂತವೀರ ಮಹಾವಿದ್ಯಾಲಯದ ಪ್ರೌಢಶಾಲಾ ಕಟ್ಟಡದ ನಿರ್ಮಾಣಕ್ಕೆ ಉಪಯೋಗಿಸಿ, ಅದೇ ಶಾಲೆಯ ವಿಜ್ಞಾನ ಕೊಠಡಿಗೆ ‘ಕೆಂಚವ್ವ ಸೈನ್ಸ್ ಹಾಲ್’ ಎಂದು ಹೆಸರಿಟ್ಟು ಆಕೆಯ ಪೋಟೋ ಹಾಕಿಸಿದ್ದರು. ಇನ್ನೊಂದು ಕುತೂಹಲದ ಸಂಗತಿ ಎಂದರೆ ಆ ಸ್ವಾಮೀಜಿಗಳು ಆಕೆಯನ್ನು ಮಠದ ಉತ್ತರಾಧಿಕಾರಿಯನ್ನಾಗಿ ಮಾಡಬೇಕಂದು ಬಯಸಿದ್ದರು. ಆದರೆ ಆಕೆಯ ತಾಯಿ ಒಪ್ಪಲಿಲ್ಲವಂತೆ. ಈ ಎಲ್ಲವನ್ನ ಕೇಳುತ್ತಿದ್ದಂತೆಯೇ ಜಾತ್ಯಾತೀತ ಜೀವಗಳೇ ಕಣ್ಣೆದುರಿಗೆ ನಡೆದಾಡಿದಂತೆ ಕಾಣುತ್ತಾರೆ. ಇದು ನಿಜವಾಗಿಯೂ ನಡೆನುಡಿಯ ಪ್ರತೀಕ ಮತ್ತು ಪ್ರತಿರೂಪ.” ಎನ್ನುತ್ತಾರೆ.
ಶರಣ ಸಂಸ್ಕೃತಿಗೆ ಒಮ್ಮನದ ದಾರಿ ಹಿಡಿದು ನಡೆದವರ ಜೀವನ ‘ಮರಣವೇ ಮಹಾನವಮಿ’. ‘ನುಡಿದರೆ ನಿಶಬ್ದ ನಡೆದರೆ ನಿರ್ಗಮನಿ’ ಎಂಬಂತೆ ಬಹುಮುಖಿ ವ್ಯಕ್ತಿತ್ವಗಳು ಸಾಮಾಜಿಕ ದಿಕ್ಸೂಚಿಗಳಾಗಲಿ.