ನೇಪಾಳದಲ್ಲಿ ಎಲ್ಲಾ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರ ಖಂಡಿಸಿ ವಿದ್ಯಾರ್ಥಿಗಳು, ಯುವ ಸಮೂಹ ಸೇರಿದಂತೆ ಜನ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಸರ್ಕಾರ ಕಳೆದ ವಾರ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾಗಳನ್ನು ಬ್ಯಾನ್ ಮಾಡಿದೆ.
ಬ್ಯಾನ್ ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಲಾಠಿ ಚಾರ್ಜ್, ಆಶ್ರುವಾಯು ಸಿಡಿಸಿ ಪ್ರತಿಭಟನಕಾರರನ್ನು ನಿಯಂತ್ರಿಸಸಳಾಗುತ್ತಿದ್ದು, ಈ ಘರ್ಷಣೆಯಲ್ಲಿ ಒಬ್ಬ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ, ಕೆಪಿ ಒಲಿ ಶರ್ಮಾ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಸಂಸ್ಥೆಗಳು ನೇಪಾಳ ಕಮ್ಯೂನಿಕೇಶನ್ ಹಾಗೂ ಐಟಿ ನಿಯಮದ ಪ್ರಕಾರ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
ನೋಂದಣಿ ಮಾಡಲು ಒಂದು ವಾರದ ಗಡುವು ನೀಡಲಾಗಿತ್ತು. ಆದರೆ ಮೆಟಾ, ಲಿಂಕ್ಡ್‌ಇನ್, ಗೂಗಲ್ ಸೇರಿದಂತೆ ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ನೋಂದಣಿ ಮಾಡಲು ಹಿಂದೇಟು ಹಾಕಿತ್ತು. ಹೀಗಾಗಿ ನೇಪಾಳ ಸರ್ಕಾರ ಗಡುವು ಮುಗಿಯುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದೆ.
ನೋಂದಣಿಗೆ ಆಗಸ್ಟ್ 28 ರಿಂದ 7 ದಿನ ಸಮಯ ನೀಡಲಾಗಿತ್ತು. ಅವಧಿ ಮುಗಿದ ಬಳಿಕವೂ ಯಾವುದೇ ಸಂಸ್ಥೆಗಳು ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾ ಸಂಸ್ಥೆಗಳ ಮೇಲೆ ನೇಪಾಳ ಸರ್ಕಾರ ನಿರ್ಬಂಧ ಹೇರಿದೆ. ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸ್ಆ್ಯಪ್) ಆಲ್ಫಾಬೆಟ್ (ಯೂಟ್ಯೂಬ್ ) ಎಕ್ಸ್ (ಟ್ವಿಟರ್), ರೆಡ್ಡಿಟ್, ಲಿಂಕ್ಡ್‌ಇನ್ ಸೇರಿದಂತೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಬ್ಯಾನ್ ಮಾಡಲಾಗಿದೆ.
ದೇಶದ ನಿಯಮ ಪಾಲನೆ ಅತ್ಯಗತ್ಯ. ಸ್ವತಂತ್ರ ದೇಶದಲ್ಲಿ ಎಲ್ಲರೂ ನಿಯಮ ಪಾಲನೆ ಮಾಡಬೇಕು. ನಿಮಯಕ್ಕಿಂತ ಮಿಗಿಲು ಯಾರೂ ಇಲ್ಲ ಎಂದು ಕೆಪಿ ಒಲಿ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ದೇಶದ ಸಾರ್ವಭೌಮತ್ವ, ಐಕ್ಯತೆ, ಸುರಕ್ಷತೆಗೆ ಧಕ್ಕೆಯಾಗಲು ಬಿಡುವುದಿಲ್ಲ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಸಂಸ್ಥೆಗಳು ನೇಪಾಳ ನಿಯಮ ಪಾಲಿಸಬೇಕಾದುದು ಅನಿವಾರ್ಯ. ಪ್ರತಿಭಟನೆಗೆ ಅವಕಾಶವಿದೆ, ಪ್ರತಿಭಟನೆ ಹೆಸರಿನಲ್ಲಿ ಗಲಭೆ, ಹಿಂಸಾಚಾರ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.