Menu

40 ಲಕ್ಷ ರೂ. ಮೇಲ್ಪಟ್ಟು ವಹಿವಾಟು ಮಾಡುವ ಸಣ್ಣ ವ್ಯಾಪಾರಿಗಳು ಜಿಎಸ್ ಟಿ ಪಾವತಿಸಬೇಕು: ಸಿಎಂ

ಯುಪಿಐ ಅಡಿ ರೂ. 40 ಲಕ್ಷಕ್ಕೂ ಅಧಿಕ ವಹಿವಾಟು ಮಾಡಿರುವವರಿಗೆ ಮಾತ್ರ ಜಿಎಸ್ಟಿ ನೊಟೀಸ್ ನೀಡಲಾಗಿದೆ. ಆರಂಭದಲ್ಲಿ ಜಿಎಸ್ಟಿ ನೊಂದಣಿ ಮಾಡುವಂತೆ ನೋಟಿಸ್ ನೀಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿ ಸಣ್ಣ ವ್ಯಾಣಿಜ್ಯೋದ್ಯಮಿಗಳ ಜೊತೆ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವ್ಯಾಪಾರಿಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಹವಾಲು ಸಲ್ಲಿಸಿದ್ದಾರೆ.  ʻಸಣ್ಣ ವ್ಯಾಪಾರಿಗಳಲ್ಲಿ ಜಿಎಸ್ಟಿ ನೊಟೀಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆ ಎಂದು ಅವರು ಸ್ಪಷ್ಟಪಡಿಸಿದರು.

ಜಿಎಸ್ ಟಿ ನೊಟೀಸ್ ನೀಡುವುದು ತಪ್ಪಲ್ಲ. ಆದರೆ ವ್ಯಾಪಾರಿಗಳಿಗೆ ಪರಿಹಾರ ತೆರಿಗೆ ಪಾವತಿಸಲು ಅವಕಾಶ ನೀಡಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ವ್ಯಾಪಾರಿಗಳು ನೇರವಾಗಿ ಇಲಾಖೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆಲವು ಪ್ರತಿನಿಧಿಗಳು ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕು. ಜಿಎಸ್ ಟಿ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು ಎಂದು ಅವರು ಹೇಳಿದರು.

ನೊಟೀಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಅದನ್ನು ಸರ್ಕಾರ ವಸೂಲು ಮಾಡುವುದಿಲ್ಲ. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಬೇಕು ಎಂದು ಮುಖ್ಯಮಂತ್ರಿ ಅವರು ಸ್ಪಷ್ಟಪಡಿಸಿದರು.

ಯುಪಿಐ ವಹಿವಾಟು ಕೈಬಿಟ್ಟರೆ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಕೇವಲ 9 ಸಾವಿರ ವ್ಯಾಪಾರಿಗಳಿಗೆ ಕಳೆದ 2-3 ವರ್ಷಗಳ ಅವಧಿಗೆ ಸಂಬಂಧಿಸಿದಂತೆ 18 ಸಾವಿರ ನೊಟೀಸ್ ಜಾರಿಗೊಳಿಸಲಾಗಿದೆ.

ವ್ಯಾಪಾರ ವಹಿವಾಟುಗಳನ್ನು ಕಾನೂನು ಬದ್ಧವಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ. ತೆರಿಗೆ ಸರಿಯಾಗಿ ಪಾವತಿಸಲು ಸಹಕಾರ ನೀಡಲಿದೆ. ವ್ಯಾಪಾರಿಗಳಿಗೆ ತೊಂದರೆ ನೀಡಬೇಕೆಂಬುವುದು ಸರ್ಕಾರದ ಉದ್ದೇಶವಲ್ಲ. ಸರ್ಕಾರ ಸಣ್ಣ ವ್ಯಾಪಾರಿಗಳ ಪರವಾಗಿದೆ.

ಜಿಎಸ್ ಟಿ ತೆರಿಗೆಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಈ ತೆರಿಗೆ ಸಂಗ್ರಹದಲ್ಲಿ ಶೇ.50ರಷ್ಟನ್ನು ರಾಜ್ಯಕ್ಕೆ ನೀಡಲಾಗುತ್ತದೆ. ದೇಶದಲ್ಲೇ ಕರ್ನಾಟಕ ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ನುಡಿದರು.

ಸರ್ಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದ್ದು, ಯಾರಿಗೂ ತೊಂದರೆಯಾಗದಂತೆ ಖಾತ್ರಿಪಡಿಸಲಾಗುವುದು. ವ್ಯಾಪಾರಿಗಳಿಗೆ ನೆರವು ನೀಡಲು ಈಗಲೇ ಸಹಾಯವಾಣಿ ಇದ್ದು, ಇದನ್ನು ಪರಿಣಾಮಕಾರಿಯಾಗಿಸಬೇಕು.

ವ್ಯಾಪಾರ ವಹಿವಾಟು ಬಂದ್ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ ಎಂದು ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತಾಗಿ ನಡೆಸಲು ನಿರ್ಧರಿಸಿದ್ದ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಕೈಬಿಡಲಾಗುವುದು ಎಂದು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದರು.

Related Posts

Leave a Reply

Your email address will not be published. Required fields are marked *