ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹತ್ತಾರು ಜನರಿಗೆ ಉದ್ಯೋಗ ನೀಡುವ ಮೂಲಕ ಅವರ ಬದುಕಿಗೆ ಆಸರೆ ಯಾಗಿವೆ. ಜತೆಗೆ ಸರ್ಕಾರಗಳಿಗೂ ಶಕ್ತಿ ತುಂಬುತ್ತಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ನಡೆದ ಸಣ್ಣ ಕೈಗಾರಿಕೆಗಳ ಸಂಘಗಳ ಒಕ್ಕೂಟದ (KASSIA) “ವಜ್ರ ಮಹೋತ್ಸವ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಈ ಸಂಸ್ಥೆಗೆ 75 ವರ್ಷಗಳು ತುಂಬಿವೆ. ಸರ್ಕಾರಕ್ಕೆ ನಿಮ್ಮ ಸೇವೆ ಅಸಾಧಾರಣ. ಸರ್ಕಾರಗಳು ಹೆಚ್ಚು ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ನೊಬೆಲ್ ಪ್ರಶಸ್ತಿ ವಿಜೇತ ಮೋಹಮದ್ ಯೂನಸ್ ಅವರು ‘ಒಬ್ಬ ವ್ಯಕ್ತಿಗೆ ಒಂದು ಹೊತ್ತಿನ ಊಟಕ್ಕೆ ಮೀನನ್ನು ಕೊಟ್ಟರೆ ಅದು ಆ ಹೊತ್ತಿಗೆ ಹೊಟ್ಟೆ ತುಂಬಿಸಬಹುದು, ಆದರೆ ಅದೇ ವ್ಯಕ್ತಿಗೆ ಮೀನುಗಾರಿಕೆ ಕಲಿಸಿ ದರೆ ಇಡೀ ಜೀವನಪೂರ್ತಿ ಹೊಟ್ಟೆ ತುಂಬಿಸಬಹುದು’ ಎಂದು ಹೇಳಿದ್ದಾರೆ. ಅದೇ ರೀತಿ ನಮ್ಮ ಸಣ್ಣ ಕೈಗಾರಿಕೆ ಗಳು ಹತ್ತಾರು ಜನರಿಗೆ ಉದ್ಯೋಗ ನೀಡಿ ಅವರ ಜೀವನಪೂರ್ತಿ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿವೆ. ಆ ಮೂಲಕ ಸರ್ಕಾರಕ್ಕೆ ಶಕ್ತಿಯಾಗಿ ನಿಂತಿವೆ” ಎಂದು ತಿಳಿಸಿದರು.
“ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಣ್ಣ ಕೈಗಾರಿಕೆಗಳು ಇವೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಲು ಭರವಸೆ ನೀಡಿದ್ದೆವು. ಅದರಂತೆ ನಾವು ಕ್ರಮ ಕೈಗೊಂಡಿದ್ದೇವೆ” ಎಂದರು.
ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ
“ನೀವು ಕನಿಷ್ಠ ವೇತನದ ವಿಚಾರವಾಗಿ ಪ್ರಸ್ತಾಪ ಮಾಡಿದ್ದೀರಿ. ಈ ಬಗ್ಗೆ ನನಗೆ ಅರಿವಿದೆ. ಈ ಬಗ್ಗೆ ನಾನು ಹಾಗೂ ದರ್ಶನಾಪುರ ಅವರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇವೆ. ನಿಮ್ಮ ಪರವಾಗಿ ಮಾತನಾಡಿದ್ದೇವೆ. ನಾವು ನಿಮ್ಮ ಪರವಾಗಿ ನಿಲ್ಲದಿದ್ದರೆ ಹೊಸೂರು ಹಾಗೂ ಆಂಧ್ರ ಗಡಿ ಭಾಗ ಕಾಣುವಂತಾಗುತ್ತದೆ. ಹೀಗಾಗಿ ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. ನಾವು ಕಾರ್ಮಿಕ ಸಚಿವರ ಜತೆ ಚರ್ಚೆ ಮಾಡುತ್ತೇವೆ. ಈ ವಿಚಾರದಲ್ಲಿ ನಿಮ್ಮ ಪರವಾಗಿ ಸಕಾರಾತ್ಮಕವಾಗಿದ್ದೇವೆ” ಎಂದು ಭರವಸೆ ಕೊಟ್ಟರು.
“ಬೆಂಗಳೂರು ನಗರದಲ್ಲಿ ನಿಮ್ಮ ಖಾತೆ ವಿಚಾರ ಪ್ರಸ್ತಾಪ ಮಾಡಿದ್ದೀರಿ. ನಮ್ಮ ಕಂದಾಯ ಸಚಿವರು ಇದನ್ನು ಒಂದು ವ್ಯವಸ್ಥಿತ ರೂಪಕ್ಕೆ ತರಲು ಮುಂದಾಗಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಎಲ್ಲಾ ಆಸ್ತಿಗಳನ್ನು ಪರಿಶೀಲಿಸಿ, ಎಲ್ಲಾ ದಾಖಲೆಗಳನ್ನು ಸರಿಮಾಡಿ ಜನರ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಶೇ. 60 ರಷ್ಟು ಆಸ್ತಿಗಳ ಪರಿಶೀಲನೆ ಆಗಿದೆ. ನಾನು ಹಾಗೂ ಕಂದಾಯ ಸಚಿವರು ನಿಮ್ಮ ಜತೆ ಸಭೆ ನಡೆಸಿ ಚರ್ಚಿಸುತ್ತೇವೆ. ನಮ್ಮ ಸರ್ಕಾರ ಇರುವುದೇ ನಿಮಗೆ ಸಹಾಯ ಮಾಡಲು” ಎಂದರು.
“ನಮಗೆ ನೀವು ಸಹಕಾರ ನೀಡಿದ್ದೀರೋ ಇಲ್ಲವೋ ನಿಮ್ಮ ಆತ್ಮಸಾಕ್ಷಿಗೆ ಬಿಟ್ಟ ವಿಚಾರ. ಕೋವಿಡ್ ಸಮಯದಲ್ಲಿ ನಿರ್ಮಲ ಸೀತಾರಾಮನ್ ಅವರು ಬಿಡುಗಡೆ ಮಾಡಿದ 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ನಿಮಗೆ ಎಷ್ಟು ಬಂತೋ ಗೊತ್ತಿಲ್ಲ. ಆದರೆ ನಾನು ಹಾಗೂ ಸಿದ್ದರಾಮಯ್ಯ ಅವರು ನಿಮಗೆ ನೆರವಾಗಲು ಹೋರಾಟ ಮಾಡಿದ್ದೇವೆ” ಎಂದು ಹೇಳಿದರು.
“ನಮ್ಮ ಸರ್ಕಾರ ನೂತನ ಕೈಗಾರಿಕಾ ನೀತಿ ಜಾರಿಗೆ ತಂದಿದೆ. ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದ್ದು, ನಿಮ್ಮ ಕೈಗಾರಿಕೆಗಳು ಬೆಂಗಳೂರು ನಗರದ ಒಳಗೆ ಸೇರಿಕೊಂಡಿವೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ಸ್ಪಂದಿಸಲು ನಾವು ಬದ್ಧವಾಗಿದ್ದೇವೆ. ಎರಡು ಹಾಗೂ ಮೂರನೇ ಹಂತದ ನಗರಗಳ ಪೈಕಿ ನಿಮಗೆ ಎಲ್ಲಿ ಜಾಗ ಸೂಕ್ತವಾಗಿದೆ ಎಂದು ನೀವೇ ಪಟ್ಟಿ ಮಾಡಿ. ಕಾರ್ಮಿಕರು, ನೀರು ಹಾಗೂ ವಿದ್ಯುತ್ ನಿಮ್ಮ ಪ್ರಮುಖ ಆಧಾರ ಅಂಶಗಳು. ನೀವು ಬಲವಾದಷ್ಟು ನಾವು ಬಲಶಾಲಿಯಾಗುತ್ತೇವೆ. ನೀವು ದುರ್ಬಲರಾದರೆ ನಾವು ದುರ್ಬಲರಾಗುತ್ತೇವೆ” ಎಂದರು.
“ವಿದ್ಯುತ್ ವಿಚಾರದಲ್ಲಿ ನಮ್ಮ ಸರ್ಕಾರ 2 ಬಾರಿ ದರ ಇಳಿಕೆ ಮಾಡಿದೆ. ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಜೀವನದಲ್ಲಿ ಯಶಸ್ಸು ಸಾಧಿಸಲು ಧರ್ಮರಾಯನ ಧರ್ಮ, ಭೀಮನ ಬಲ, ಕರ್ಣನ ಧಾನತ್ವ, ಅರ್ಜುನನ ಗುರಿ, ವಿಧುರನ ನೀತಿ, ಕೃಷ್ಣನ ತಂತ್ರ ಇರಬೇಕು. ನಮಗೆ ನೀವು, ನಿಮಗೆ ನಾವು ಸಹಾಯ ಸಹಕಾರ ನೀಡುತ್ತಾ ಸಾಗಬೇಕು. ನಾವು ಗ್ಯಾರಂಟಿ ಯೋಜನೆ ಮೂಲಕ ಬಡವರು ಕಾರ್ಮಿಕರಿಗೆ 52 ಸಾವಿರ ಕೋಟಿ ಮೀಸಲಿಟ್ಟಿರುವುದೇ ಆರ್ಥಿಕತೆ ಬೆಳೆಯಲು. ಈ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ನೀವು ನೆರವಾಗಬೇಕು” ಎಂದು ಕರೆ ಕೊಟ್ಟರು.
ಮಳೆ ಪರಿಸ್ಥಿತಿ ನಿಭಾಯಿಸುತ್ತೇವೆ: ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಪ್ರತಿಕ್ರಿಯಿಸಿದರು. ಬೆಂಗಳೂರಿನ ಮಳೆ ಬಗ್ಗೆ ಕೇಳಿದಾಗ “ಬೆಂಗಳೂರಿನಲ್ಲಿ ಮಳೆಯಿಂದ ಎಲ್ಲೆಲ್ಲಿ ಏನಾಗಿದೆ ಎಂದು ನಮ್ಮ ಅಧಿಕಾರಿಗಳ ತಂಡ ಮಾಹಿತಿ ಕಲೆಹಾಕುತ್ತಿದೆ. ನಗರದಲ್ಲಿ ಮಳೆಯ ಪರಿಸ್ಥಿತಿಯನ್ನು ನಿಭಾಯಿಸುತ್ತೇವೆ” ಎಂದು ಹೇಳಿದರು.
ಕೊತ್ತನೂರು ಮಂಜುನಾಥ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಇಡೀ ಪಕ್ಷ ಸೈನಿಕರ ಪರವಾಗಿದೆ. ಶಾಸಕರನ್ನು ಕರೆದು ಈ ವಿಚಾರವಾಗಿ ಮಾತನಾಡುತ್ತೇನೆ” ಎಂದರು.
ಹೋಟೆಲ್ ನಲ್ಲಿ ಕನ್ನಡಿಗರ ವಿರುದ್ಧ ಬೋರ್ಡ್ ಹಾಕಿರುವ ಬಗ್ಗೆ ಕೇಳಿದಾಗ, “ಇಂತಹ ಪ್ರಕರಣಗಳಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ. ಕನ್ನಡದ ವಿಚಾರವಾಗಿ ನಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಈ ಹಿಂದೆ ಯಾರೂ ಮಾಡಿಲ್ಲ, ಮುಂದೆಯೂ ಮಾಡಲು ಸಾಧ್ಯವಿಲ್ಲ. ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.