ತಮ್ಮ ಮಕ್ಕಳಾದ ಉದಯಶಂಕರ್ ಹಾಗೂ ರವಿಶಂಕರ್ ಯಾವುದೇ ಕಾರಣಕ್ಕೂ ತಮ್ಮ ಅಂತ್ಯಕ್ರಿಯೆ ನೆರವೇರಿಸುವಂತಿಲ್ಲ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ವಿಲ್ ಬರೆಸಿದ್ದಾರೆ ಎನ್ನಲಾಗುತ್ತಿದೆ.
ಭೈರಪ್ಪ ಅವರು ಬರೆಸಿರುವುದು ಎನ್ನಲಾಗುತ್ತಿರುವ ವಿಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭೈರಪ್ಪ ಅವರು ಬುಧವಾರ (ಸೆಪ್ಟೆಂಬರ್ 25) ಹೃದಯಾಘಾತದಿಂದ 94ನೇ ವಯಸ್ಸಿನಲ್ಲಿ ನಿಧನರಾದರು. ಆದರೆ, ಅವರು ಜೂನ್ 18ರಂದು ತಿದ್ದುಪಡಿ ಮಾಡಿದ್ದ ವಿಲ್ ನ ಪ್ರತಿಯನ್ನು ಅವರ ಅಭಿಮಾನಿ ಫಣೀಶ್ ಎಂಬಾತ ಮೈಸೂರಿನ ಕಲಾಮಂದಿರದಲ್ಲಿ ಭೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಪ್ರದರ್ಶಿಸಿದರು.
ಅಂತ್ಯಕ್ರಿಯೆಯನ್ನು ಮಕ್ಕಳಾದ ಉದಯಶಂಕರ್ ಮತ್ತು ರವಿಶಂಕರ್ ನೆರವೇರಿಸಬಾರದು, ಬದಲಾಗಿ ಬದುಕಿನ ಕೊನೆಯ ದಿನಗಳಲ್ಲಿ ಅವರನ್ನು ನೋಡಿಕೊಂಡಿದ್ದ ಹೆಣ್ಣುಮಗಳೇ ಅಂತಿಮ ಸಂಸ್ಕಾರ ನೆರವೇರಿಸಬೇಕು ಎಂಬುದು ಭೈರಪ್ಪನವರ ಆಶಯ ಎಂದು ಫಣೀಶ್ ವಾದಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪೊಲೀಸರು ಪೊಲೀಸರು ಫಣೀಶ್ ಅವರನ್ನು ವಶಕ್ಕೆ ಪಡೆದುಕೊಂಡರು.
ಈ ತಿದ್ದುಪಡಿ ಪತ್ರವನ್ನು ಬರೆಯುವ ಸಮಯದಲ್ಲಿ ಭೈರಪ್ಪ ಅವರ ಪಂಚೇಂದ್ರಿಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಅವರ ಯೋಚನಾ ಮತ್ತು ಬುದ್ಧಿಶಕ್ತಿಯು ಸಂಪೂರ್ಣ ಹತೋಟಿಯಲ್ಲಿದ್ದು, ಯಾವುದೇ ಒತ್ತಡಕ್ಕೆ ಒಳಗಾಗದೆ ಸ್ವ-ಇಚ್ಛೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಉಯಿಲಿನ ಎಲ್ಲ ಅಂಶಗಳು, ದಿನಾಂಕ 15-03-2022 ರ ಮೂಲ ಉಯಿಲು ಮತ್ತು 30-01-2025 ರ ತಿದ್ದುಪಡಿ ಸೇರಿದಂತೆ, ಅವರ ಕಾಲಾನಂತರವೇ ಜಾರಿಗೆ ಬರಬೇಕು. ತಮ್ಮ ಜೀವಿತ ಕಾಲದಲ್ಲಿ ಈ ಉಯಿಲನ್ನು ಪುನಃ ತಿದ್ದುಪಡಿ ಮಾಡುವ ಅಥವಾ ರದ್ದುಪಡಿಸುವ ಹಕ್ಕನ್ನು ಭೈರಪ್ಪ ಅವರು ಉಳಿಸಿಕೊಂಡಿದ್ದಾರೆ ಎಂದು ಬರೆದಿರುವ ವಿಲ್ ಬಾಂಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ಈ ಕುರಿತು ಭೈರಪ್ಪ ಅವರ ಕುಟುಂಬಸ್ಥರಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಹೀಗಾಗಿ ಆ ವಿಲ್ ಗೊಂದಲಕ್ಕೆ ಕಾರಣವಾಗಿದ್ದು, ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.