ಕನ್ನಡದ ಖ್ಯಾತ ಕಾದಂಬರಿಕಾರ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್ ಎಲ್ ಭೈರಪ್ಪ ಅವರ ಅಂತ್ಯ ಸಂಸ್ಕಾರ ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿತು. ಅವರ ಪುತ್ರರಾದ ರವಿಶಂಕರ್, ಉದಯಶಂಕರ್ ಅಂತ್ಯ ಸಂಸ್ಕಾರದ ವಿಧಿ ವಿಧಾನ ಪೂರೈಸಿದರು. ಜೊತೆಗೆ ಸಹನಾ ವಿಜಯ್‌ಕುಮಾರ್ ಭೈರಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಭೈರಪ್ಪ ಅವರು ಬುಧವಾರ (ಸೆಪ್ಟೆಂಬರ್ 25) ಹೃದಯಾಘಾತದಿಂದ 94ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಮಕ್ಕಳಾದ ಉದಯಶಂಕರ್ ಹಾಗೂ ರವಿಶಂಕರ್ ಯಾವುದೇ ಕಾರಣಕ್ಕೂ ತಮ್ಮ ಅಂತ್ಯಕ್ರಿಯೆ ನೆರವೇರಿಸುವಂತಿಲ್ಲ ಎಂದು ಭೈರಪ್ಪ ಅವರು ವಿಲ್ ಬರೆಸಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಂತ್ಯಕ್ರಿಯೆಯನ್ನು ಮಕ್ಕಳಾದ ಉದಯಶಂಕರ್ ಮತ್ತು ರವಿಶಂಕರ್ ನೆರವೇರಿಸಬಾರದು, ಬದಲಾಗಿ ಬದುಕಿನ ಕೊನೆಯ ದಿನಗಳಲ್ಲಿ ಅವರನ್ನು ನೋಡಿಕೊಂಡಿದ್ದ ಹೆಣ್ಣುಮಗಳೇ ಅಂತಿಮ ಸಂಸ್ಕಾರ ನೆರವೇರಿಸಬೇಕು ಎಂಬುದು ಭೈರಪ್ಪನವರ ಆಶಯ ಎಂದು ಅವರ ಅಭಿಮಾನಿ ಫಣೀಶ್ ಮೈಸೂರಿನಲ್ಲಿ ವಾದಿಸಿ ವಿಲ್ ಪ್ರತಿ ತೋರಿಸಿದ್ದರು.
ಭೈರಪ್ಪ ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ, ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಅಂತಿಮ ಗೌರವ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದು, ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಭೈರಪ್ಪನವರಿಗೆ ಮೈಸೂರು ಕರ್ಮಸ್ಥಳ ಎಂದರು.
ಭೈರಪ್ಪನರು 1931ರ ಆಗಸ್ಟ್ 20ರಂದು ಚನ್ನರಾಯಪಟ್ಟಣದ ಬಳಿಯ ಸಂತೆಶಿವರ ಎಂಬ ಗ್ರಾಮದಲ್ಲಿ ಹುಟ್ಟಿದರು. ಮೈಸೂರಿನ ಶಾರದ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ಮೇಲೆ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ 1957ರಲ್ಲಿ ಬಿ.ಎ. ಮುಗಿಸಿದರು. 1958ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯಲ್ಲಿ ಚಿನ್ನದ ಪದಕ ಗಳಿಸಿದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಿಂದ ‘ಸತ್ಯ ಮತ್ತು ಸೌಂದರ್ಯ’ ಎಂಬ ಇಂಗ್ಲಿಷಿನಲ್ಲಿ ರಚಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದರು.
ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ, 1960ರಿಂದ 1966ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಭೈರಪ್ಪ ಸೇವೆ ಸಲ್ಲಿಸಿದರು. 1967ರಿಂದ 1971ರ ವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಉಪಪ್ರಾಧ್ಯಾಪಕರಾಗಿದ್ದರು. ನಂತರ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತತ್ವಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರದ ಪ್ರಾಧ್ಯಾಪಕರಾಗಿ 1991ರಲ್ಲಿ ನಿವೃತ್ತರಾದರು.
ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ನಿರಾಕರಣ, ಗ್ರಹಣ, ದಾಟು, ಅನ್ವೇಷಣ, ಪರ್ವ, ನೆಲೆ, ಸಾಕ್ಷಿ, ಅಂಚು, ತಂತು, ಸಾರ್ಥ, ಮಂದ್ರ, ಆವರಣ, ಕವಲು, ಯಾನ, ಉತ್ತರಕಾಂಡ ಭೈರಪ್ಪನವರ ಪ್ರಕಟಿತ ಕಾದಂಬರಿಗಳು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ನಾಯಿನೆರಳು, ಮತದಾನ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿವೆ. ಗೃಹಭಂಗ ದೂರದರ್ಶನದಲ್ಲಿ ಧಾರಾವಾಹಿ ಯಾಗಿ ಪ್ರಸಾರ ಆಗಿತ್ತು.