ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಳಿ ಬಂದಿರುವ 60% ಕಮಿಷನ್ ಆರೋಪವನ್ನೂ ಸೇರಿಸಿ ಎಸ್ ಐಟಿ ತನಿಖೆಗೆ ವಹಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ 40% ಕಮಿಷನ್ ಆರೋಪದ ತನಿಖೆಗೆ ಎಸ್ ಐಟಿ ರಚಿಸಲು ತೀರ್ಮಾನಿಸಿರುವ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, 40% ಭ್ರಷ್ಟಾಚಾರದ ಬಗ್ಗೆ ಸುಳ್ಳು ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಈಗಾಗಲೇ ಆಯೋಗ ರಚನೆ ಮಾಡಿದ್ದರು. ಆ ಕಮಿಷನ್ ವರದಿಯಲ್ಲಿ ಏನಿದೆ ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕು. ಈ ಸರ್ಕಾರ ಕದ್ದು ಮುಚ್ಚಿ ಯಾಕೆ ಮಾಡುತ್ತಾರೆ. ಕಳೆದ ಎರಡು ವರ್ಷದಲ್ಲಿ ಈ ಸರ್ಕಾರದ ವಿರುದ್ದ 60% ಆರೋಪ ಕೇಳಿ ಬಂದಿದೆ. ಅದನ್ನೂ ಸೇರಿಸಿ ಎಸ್ ಐಟಿ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದಲ್ಲಿ 60% ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪಿಡಬ್ಲುಡಿ, ಅಬಕಾರಿ, ಎಲೆಕ್ಟ್ರಿಕ್ ಕಂಟ್ರಾಕ್ಟರ್ ಅಸೊಸಿಯೇಷನ್ ನವರು ಬಹಿರಂಗ ಆರೋಪ ಮಾಡಿದ್ದಾರೆ. ತಮ್ಮ ಸರ್ಕಾರದಲ್ಲಿ ನಡೆದಿರುವ ಆರೋಪದ ಸಮೇತ ತನಿಖೆ ಮಾಡಬೇಕು. ನಮ್ಮ ಮೇಲೆ ಸುಳ್ಳು ಪ್ರಚಾರ ರಾಜಕಿಯ ದ್ವೇಷದಿಂದ ಮಾಡಿರುವುದಕ್ಕೆ ಎಲ್ಲಿ ದಾಖಲೆ ಸಿಗುತ್ತದೆ. ಈಗ ಸಿಎಂ ಹಾಗೂ ಡಿಸಿಎಂ ಅವರು ಕಮಿಷನ್ ಕೇಳಿದ್ಧರೆ ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಡಿ ಅಂತ ಹೇಳುತ್ತಾರೆ. ನಾವು ಇದ್ದಾಗಲೂ ಲೊಕಾಯುಕ್ತಕ್ಕೆ ದೂರು ಕೊಡಿ ಅಂತ ಹೇಳಿದ್ದೆ ಕೊಡಲಿಲ್ಲ ಎಂದು ಹೇಳಿದರು.
ಗುತ್ತಿಗೆದಾರರು ಮಾಡಿರುವ ಕಾಮಗಾರಿಗೆ ಹಿರಿತನದ ಆಧಾರದಲ್ಲಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಮಾಡಿದ ಕೆಲಸಕ್ಕೆ ಕೊಡಲು ಹಣ ಇಲ್ಲ. ಹೀಗಾಗಿ ಗುತ್ತಿಗೆದಾರರು ಟೆಂಡರ್ ಆಗಿದ್ದರೂ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ಜಾತಿ ಗಣತಿ ರಾಜಕಾರಣ
ಈ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ರಾಜಕಾರಣ ಮಾಡುತ್ತಿದೆ. ಮೊದಲೇ ಗಣತಿ ಮಾಡುವ ಮುಂಚೆ ಜಾತಿ ಗಣತಿ ಅಂತ ಆದೇಶ ಮಾಡಬೇಕಿತ್ತು. ಸಾಮಾಜಿಕ ಆರ್ಥಿಕ ಸಮೀಕ್ಷೆ ಅಂತ ಹೇಳಿ ಜಾತಿ ಬರೆಸಿಕೊಂಡು ಬಂದಿದ್ದಾರೆ. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಕೊಟ್ಟ ವರದಿಗೆ ಕಾರ್ಯದರ್ಶಿ, ಸದಸ್ಯರು ಸಹಿ ಹಾಕಿಲ್ಲ. ಇನ್ಬೊಬ್ಬ ಅಧ್ಯಕ್ಷರು ಅದಕ್ಕೆ ತೇಪೆ ಹಚ್ಚಿರುವ ವರದಿ ನೀಡಿದ್ದಾರೆ. ಈ ಸರ್ಕಾರಕ್ಕೆ ಹಿಂದುಳಿದ ವರ್ಗದವರ ಬಗ್ಗೆ ಕಾಳಜಿ ಇದ್ದರೆ ವರದಿಯನ್ನು ಬಹಿರಂಗ ಮಾಡಿ, ಅವರಿಗಾಗಿ ಏನು ಯೋಜನೆ ಮಾಡುತ್ತಾರೆ ಅದನ್ನು ಹೇಳಬೇಕು. ನಿನ್ನೆಯ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದರು. ಈಗ ಮತ್ತೆ ಮುಂದಿನ ಸಂಪುಟದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಅದರ ಅಧ್ಯಯನಕ್ಕೆ ಮತ್ತೊಂದು ಸಂಪುಟ ಉಪ ಸಮಿತಿ ಮಾಡುತ್ತಾರೆ. ಮುಖ್ಯಮಂತ್ರಿಗಳು ಹಿಂದುಳಿದವರ ಬಗ್ಗೆ ಬರೆ ಭಾಷಣ ಮಾಡುವುದರಿಂದ ಹೊಟ್ಟೆ ತುಂಬಲ್ಲ. ಮುಖ್ಯಮಂತ್ರಿಗಳು ಸುಮಾರು ಮೂರ್ನಾಲ್ಕು ವರ್ಷದಿಂದ ಅದನ್ನೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಕಮಿಟ್ ಮೆಟ್ ಇಲ್ಲ. ಎಲ್ಲಿ ಕಮಿಟ್ ಮೆಟ್ ಇರುವುದಿಲ್ಲವೋ ಅಲ್ಲಿ ಕಮಿಟಿ ನೇಮಕ ಆಗುತ್ತದೆ ಎಂದು ಹೇಳಿದರು.