Menu

ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ ತನಿಖೆಗೆ ಎಸ್ಐಟಿ ರಚನೆ: ಡಿಸಿಎಂ

“ನೀರಾವರಿ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪಗಳ ಬಗ್ಗೆ ತನಿಖೆಗೆ ಎಸ್ಐಟಿ ರಚಿಸಲಾಗುವುದು. ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ, ವಕೀಲರನ್ನು ವಜಾಗೊಳಿಸಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಜಲ ಸಂಪನ್ಮೂಲ, ಬಿಡಿಎ ಭೂಸ್ವಾಧೀನ ಪ್ರಕರಣಗಳ ಕುರಿತು ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಶಿವಕುಮಾರ್  ವಿಧಾನಸೌಧದಲ್ಲಿ  ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

“ನೀರಾವರಿ ಇಲಾಖೆ ಹಾಗೂ ಬಿಡಿಎ ವ್ಯಾಪ್ತಿಯಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಚಾರವಾಗಿ ನ್ಯಾಯಾಲಯ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಇಲಾಖೆಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳಿವೆ, ಯಾವ ಕಾರಣಕ್ಕೆ ಇವೆ, ಯಾಕೆ ಇವು ಇತ್ಯರ್ಥವಾಗಿಲ್ಲ ಎಂಬ ವಿಚಾರವಾಗಿ ನಾನು ಇಲಾಖೆಯಲ್ಲಿ ತನಿಖೆ ಮಾಡಿಸಿದ್ದೇನೆ. ನನಗೆ ಬಂದ ಮಾಹಿತಿ ಪ್ರಕಾರ ಈ ಪ್ರಕರಣಗಳಿಂದ ಸರ್ಕಾರಕ್ಕೆ ಬಹಳ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇ ಗೌಡರು, ಕಾನೂನು ಸಚಿವ ಹೆಚ್.ಕೆ. ಪಾಟೀಲ್  ಹಾಗೂ ದೆಹಲಿಯ ವಕೀಲರ ತಂಡ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ” ಎಂದು ತಿಳಿಸಿದರು.

ನೀರಾವರಿ ಇಲಾಖೆಗೆ ಸಂಬಂಧಿಸಿದ 61, 843 ಪ್ರಕರಣಗಳು ಬಾಕಿ

ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಒಪ್ಪಿತ ಭೂಸ್ವಾಧೀನಕ್ಕೆ ಪರಿಹಾರದ ಮೊತ್ತ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕೆ ಸುಮಾರು 75 ಸಾವಿರ ಕೋಟಿ ರೂ. ಮೀಸಲಿರಿ ಸಲಾಗುವುದು. ವಿವಿಧ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ 61, 843 ಪ್ರಕರಣಗಳಿವೆ. ಕೆಎನ್ಎನ್ಎಲ್ ನಲ್ಲಿ 25,356, ವಿಜೆಎನ್ಎಲ್ ನಲ್ಲಿ 2,856, ಸಿಎನ್ಎನ್ಎಲ್ ನಲ್ಲಿ 4455, ಯುಕೆಪಿ, ಆರ್ ಅಂಡ್ ಆರ್ ಹಾಗೂ ಕೆಬಿಜೆಎನ್ಎಲ್ ನಲ್ಲಿ 29,176 ಪ್ರಕರಣಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು.

“ಕಂದಾಯ ಇಲಾಖೆಯವರು ಬೆಂಗಳೂರು ವ್ಯಾಪ್ತಿಯಲ್ಲಿ ತನಿಖೆ ಮಾಡಲು ಆದೇಶ ಮಾಡಿದ್ದು, ಅಧಿಕಾರಿಗಳು, ಕಾನೂನು ತಂಡದವರು ಸೇರಿ ಸರಿಯಾದ ಸಮಯದಲ್ಲಿ ಅರ್ಜಿ ಹಾಕದೇ ಕಾಲಹರಣ ಮಾಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಕೆಲವು ಪ್ರಮುಖ ಪ್ರಕರಣಗಳು ನ.10ರಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು, ಅಷ್ಟರೊಳಗೆ ನಮ್ಮಲ್ಲಿ ಆಗಿರುವ ನ್ಯೂನ್ಯತೆ ಗಮನಕ್ಕೆ ತರಬೇಕಾಗಿದೆ. ಇದರ ಜೊತೆಗೆ ಎಸ್ಐಟಿ ರಚಿಸಿ ಎಲ್ಲೆಲ್ಲಿ ಯಾವ ರೀತಿ ಪಿತೂರಿ ನಡೆದಿದೆ ಎಂದು ವಿಚಾರಣೆ ನಡೆಸಲಾಗುವುದು. ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಇಲಾಖೆವಾರು ತನಿಖೆಗೆ ಆದೇಶಿಸಿ ಎಲ್ಲರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಇನ್ನು ವಕೀಲರುಗಳ ಪೈಕಿ ಯಾರು ಸಮಯಕ್ಕೆ ಸರಿಯಾಗಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಕಾನೂನುಬದ್ಧವಾಗಿ ಸಲ್ಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಅವರನ್ನು ವಜಾಗೊಳಿಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳು, ವಕೀಲರು ಎಲ್ಲರನ್ನು ಹೊಣೆಗಾರರನ್ನಾಗಿ ಮಾಡಲು ನಿರ್ಧರಿಸಿದ್ದೇವೆ. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ” ಎಂದರು.

“ನೀರಾವರಿ ಇಲಾಖೆ ಪ್ರಕರಣಗಳ ವಾದ ಮಂಡಿಸಲು 219 ವಕೀಲರಿದ್ದಾರೆ. ಇವುಗಳಲ್ಲಿ ಯಾರು ಹೊಣೆಗಾರರಿಲ್ಲ, ಅವರೆಲ್ಲರನ್ನು ಕಿತ್ತೊಗೆದು ಬೇರೆ ವಕೀಲರನ್ನು ನೇಮಿಸಲಾಗುವುದು. ನಮ್ಮ ಇಲಾಖೆಯ ಗೌರವ ಉಳಿಸಲು ರಾಜ್ಯದಲ್ಲೇ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ” ಎಂದು ತಿಳಿಸಿದರು.

ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಕ್ಕೆ ಪ್ರಾಧಿಕಾರ ರಚನೆ

“ನೂತನ ಕಾಯ್ದೆ ಪ್ರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಾಧಿಕಾರ ರಚನೆಗೆ ಅವಕಾಶವಿದೆ. ಆಮೂಲಕ ನ್ಯಾಯಾಲಯದ ಮೆಟ್ಟಿಲೇರದೆ ಇಲ್ಲೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲಾಗುವುದು. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹಾಗೂ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಈ ಪ್ರಾಧಿಕಾರವನ್ನು ಯಾವ ರೀತಿ ರಚಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ನಮ್ಮ ಸರ್ಕಾರ ಈ ಪ್ರಾಧಿಕಾರ ರಚಿಸಲಿದೆ” ಎಂದು ತಿಳಿಸಿದರು.

9 ಲಕ್ಷ ಪರಿಹಾರ ನಿಗದಿಯಾಗಿದ್ದರೆ 9 ಕೋಟಿ ಪರಿಹಾರಕ್ಕೆ ಕೋರ್ಟ್ ತೀರ್ಪು

“ಕೆಲವು ಸಂದರ್ಭದಲ್ಲಿ ಕಂದಾಯ ಇಲಾಖೆ ಭೂಸ್ವಾಧೀನ ಪ್ರಕ್ರಿಯೆ ಮಾಡಿದರೂ ಪರಿಹಾರ ಹಣ ನೀಡಬೇಕಾಗಿರುವುದು ನೀರಾವರಿ ಇಲಾಖೆಯ ವಿವಿಧ ನಿಗಮಗಳಾಗಿರುತ್ತವೆ. ಇಂತಹ ಪ್ರಕರಣಗಳಲ್ಲಿ ಈ ನಿಗಮಗಳನ್ನೇ ಪಾರ್ಟಿಯನ್ನಾಗಿ ಮಾಡದೇ ಪ್ರಕರಣ ನಡೆಸಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ. ಸುಪ್ರೀಂ ಕೋರ್ಟ್ ನಲ್ಲಿ ಎಸ್ಎಲ್ ಪಿ ಅರ್ಜಿ ಹಾಕುತ್ತಿದ್ದು, ಕೆಲವು ಪ್ರಕರಣವನ್ನು ವಾಪಸ್ ತರಲು ಮುಂದಾಗಿದ್ದೇವೆ. ನೀರಾವರಿ ಇಲಾಖೆಯಲ್ಲಿ 9 ಲಕ್ಷ ರೂಪಾಯಿ ಪರಿಹಾರ ನಿಧಿ ಘೋಷಿಸಿದ್ದರೆ, ನ್ಯಾಯಾಲಯದಲ್ಲಿ ಅರ್ಜಿ ಹಾಕಿ 9, 10, 15, 20 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಹೀಗಾಗಿ ನಮ್ಮ ಸರ್ಕಾರ ಈ ತೀರ್ಮಾನಕ್ಕೆ ಬರಲಾಗಿದೆ” ಎಂದರು.

“ವಿಳಂಬ ಪ್ರಕ್ರಿಯೆ ತಡೆಯಲು ಸುಪ್ರೀಂ ಕೋರ್ಟಿನ ವಕೀಲರ ಸಲಹೆ ಪಡೆದು ಮುಂದಿನ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ. ದೆಹಲಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಇಂತಹ ಕಾನೂನು ಪ್ರಕರಣಗಳ ಪರಿಶೀಲನೆಗೆ ಕಾನೂನು ಘಟಕ ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ನಮ್ಮ ಪರ ವಕೀಲರು ಮಂಡಿಸುವ ವಾದವನ್ನು ದಾಖಲಾತಿ ಮಾಡಲು ಘಟಕ ಆರಂಭಿಸಲು ತೀರ್ಮಾನಿಸಿದ್ದೇವೆ” ಎಂದು ಮಾಹಿತಿ ನೀಡಿದರು.

“ಬಿಡಿಎ, ಜಿಬಿಎ ವ್ಯಾಪ್ತಿಯಲ್ಲೂ ಈ ರೀತಿ ವಾದ ದಾಖಲೆಗಳನ್ನು ಮಾಡಲಾಗುವುದು. ಕಾನೂನು ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು. ಪ್ರಾಧಿಕಾರ ರಚಿಸಲಾಗುವುದು. ಇನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ 1 ಹಾಗೂ 2 ರಸ್ತೆಯ ಭೂಸ್ವಾಧೀನಕ್ಕೆ ಪರಿಹಾರ ನೀಡಲು ಐದು ಅವಕಾಶ ನೀಡಲಾಗಿದೆ. ಈ ಯೋಜನೆ ವಿಚಾರದಲ್ಲಿ ನಾವು ಹಿಂದೆ ಸರಿಯುವುದಿಲ್ಲ. ಆರು ತಿಂಗಳಲ್ಲಿ ನಾವು ಕೆಲಸ ಪ್ರಾರಂಭಿಸಬೇಕು. ಒಂದು ತಿಂಗಳ ಒಳಗಾಗಿ ಪರಿಹಾರ ವಿತರಣೆ ಆರಂಭಿಸಬೇಕು, ವಿಳಂಬ ಮಾಡಿದರೆ ಹಳೇ ಅಧಿಕಾರಿಗಳನ್ನು ತೆಗೆದುಹಾಕಿ ಹೊಸ ಅಧಿಕಾರಿಗಳ ನಿಯೋಜಿಸಿ ಕೆಲಸ ಮುಂದುವರಿಸುತ್ತೇವೆ” ಎಂದು ತಿಳಿಸಿದರು..

ಈ ವಿಳಂಬದಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗುತ್ತದೆ, ಈ ರೀತಿ ಕಾನೂನು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಪರಿಹಾರ ಮೊತ್ತ ಪಡೆದಿರುವ ಪ್ರಕರಣಗಳಿವೆಯೇ ಎಂದು ಕೇಳಿದಾಗ, “ಇಲ್ಲಿ ವೈಯಕ್ತಿಕ ಪ್ರಕರಣಗಳು ಇದ್ದು, ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿ ಎಷ್ಟು ಲಕ್ಷ ಕೋಟಿ ಪರಿಹಾರವಾಗಿ ನೀಡಬೇಕಾಗುತ್ತದೆಯೋ ಗೊತ್ತಿಲ್ಲ. ಎಷ್ಟೋ ಜನ ರೈತರು ನಾವು ಯಾವುದಕ್ಕೆ ಸಹಿ ಹಾಕಿದ್ದೇವೆ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಾವು ಎಲ್ಲ ಅಂಶಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಸರ್ಕಾರ ಕೂಡ ಹೆದ್ದಾರಿ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರು ನೀಡಿದ್ದಾರೆ. ನಾನು, ಬಿಡಿಎ ಅಧ್ಯಕ್ಷರು, ಕಾರ್ಯದರ್ಶಿಗಳು ದೆಹಲಿಗೆ ಹೋಗಿ ಸಭೆ ಮಾಡಿ ಬಂದಿದ್ದೇವೆ. ಈ ಲೋಪವನ್ನು ನಾವು ಸರಿಪಡಿಸದಿದ್ದರೆ ಸರ್ಕಾರಕ್ಕೆ ಸುಮಾರು 5 ಲಕ್ಷ ಕೋಟಿಯಷ್ಟು ಹೊರೆಯಾಗುವ ಸಾಧ್ಯತೆ ಇದೆ” ಎಂದು  ಉತ್ತರಿಸಿದರು.

ಈ ತನಿಖಾ ವರದಿ ಸಲ್ಲಿಸಲು ಕಾಲಮಿತಿ ನಿಗದಿ ಮಾಡಲಾಗಿದೆಯೇ ಎಂದು ಕೇಳಿದಾಗ, “ಇದಕ್ಕಾಗಿ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ಮುಂದಿನ 10-15 ದಿನಗಳಲ್ಲಿ ವರದಿ ಬರಲಿದೆ. ನಂತರ ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಎಸ್ಐಟಿ ರಚಿಸಿ ಸಮಗ್ರ ತನಿಖೆ ಮಾಡಲಾಗುವುದು” ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಹಂತ ಹಂತವಾಗಿ ಜಾರಿ

ಮೇಕೆದಾಟು ಯೋಜನೆ ಬಗ್ಗೆ ಕೇಳಿದಾಗ, “ಇಂದು ತೀರ್ಪಿನ ಪ್ರತಿ ಬಂದಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ, ನಿಯೋಗವನ್ನು ಕರೆದುಕೊಂಡು ಹೋಗುವ ಬಗ್ಗೆ ಸಂಸದರಿಗೆ ಮಾಹಿತಿ ನೀಡಬೇಕು, ಸರ್ವಪಕ್ಷ ಸಭೆ ಕರೆಯಬೇಕು. ಈ ಸಭೆಯನ್ನು ದೆಹಲಿಯಲ್ಲಿ ಮಾಡಬೇಕೇ ಅಥವಾ ಬೆಂಗಳೂರಿನಲ್ಲಿ ಮಾಡಬೇಕೇ ಎಂದು ಸಿಎಂ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಸಿಡಬ್ಲ್ಯೂಎಂಎ, ಸಿಡಬ್ಲ್ಯೂಸಿ ಮುಂದೆಯೇ ಈ ಪ್ರಕರಣ ಇತ್ಯರ್ಥವಾಗಬೇಕು. ನ್ಯಾಯಾಲಯದ ಮೆಟ್ಟಿಲೇರುವ ಪ್ರಮೇಯ ಇರುವುದಿಲ್ಲ. ನಮ್ಮ ನೀರು ನಮ್ಮ ಹಕ್ಕು ಹೆಜ್ಜೆ ಹಾಕಿದ್ದಕ್ಕೆ, ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಡಿಪಿಆರ್ ಸಲ್ಲಿಸಲಾಗುವುದು” ಎಂದು  ಹೇಳಿದರು.

ವಿಧಾನ ಪರಿಷತ್ ಸಭಾಧ್ಯಕ್ಷರ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಕೇಳಿದಾಗ, “ನಮ್ಮ ಬಳಿ ಬಹುಮತವಿದೆ. ಎಲ್ಲಾ ಪರಿಷತ್ ಸದಸ್ಯರು ನನ್ನನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ನಾವು ಈ ಬಗ್ಗೆ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು. ರಾಜ್ಯದಲ್ಲಿ ದೊಡ್ಡಮಟ್ಟದ ರಾಜಕೀಯ ಬೆಳವಣಿಗೆಯಾಗಲಿದೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹಗಲುಗನಸು ಕಾಣುತ್ತಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದರು.

Related Posts

Leave a Reply

Your email address will not be published. Required fields are marked *