ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಪಾಲಾದ ಬಳಿಕ ಹಾಸನದಲ್ಲಿ ಪೆನ್ ಡ್ರೈವ್ ಹಂಚಿದವರನ್ನು ಎಸ್‌ಐಟಿ ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಎನ್ನಲಾದ ವೀಡಿಯೊಗೆ ಸಂಬಂಧಪಟ್ಟ ಪೆನ್ ಡ್ರೈವ್ ಹಂಚಿರುವ ಆರೋಪದಡಿ ಹಾಸನದಲ್ಲಿ ಐದಾರು ಮಂದಿಯ ಮೇಲೆ ಎಫ್ಐಆರ್ ದಾಖಲಾಗಿತ್ತು, ಪೆನ್ ಡ್ರೈವ್ ಹಂಚಿದ ಕೆಲವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮಾಡಿದ್ದ ಎಸ್ಐಟಿ ತಂಡ ಮತ್ತೆ ಅವರನ್ನು ವಿಚಾರಣೆ ನಡೆಸಲಿದೆ.
ಕೆಆರ್ ನಗರದ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಹಾಗೂ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ನೇತೃತ್ವದ ಪೀಠ ಶುಕ್ರವಾರ ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಮನೆಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿ ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಸೆಕ್ಷನ್ 376 (2) (ಕೆ) ಸೆಕ್ಷನ್ ಮತ್ತು ಸೆಕ್ಷನ್ 376 (2) (ಎನ್) ಅಡಿಯಲ್ಲಿ ಜೀವನ ಪರ್ಯಂತ ಶಿಕ್ಷೆ ಜೊತೆಗೆ ದಂಡ ವಿಧಿಸಲಾಗಿದೆ.