ವಿಜಯನಗರದ ಕೊಟ್ಟೂರಿನಲ್ಲಿ ತಂದೆ, ತಾಯಿ, ಸೋದರಿಯ ಹತ್ಯೆ ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರು ಈ ಭೀಕರ ಕೊಲೆಗೆ ಕಾರಣವೇನು ಎಂಬುದನ್ನು ಬಯಲಿಗೆಳೆದಿದ್ದಾರೆ. ತಂಗಿ ಅನ್ಯ ಸಮುದಾಯದವನನ್ನು ಪ್ರೀತಿಸುತ್ತಿದ್ದು, ಗರ್ಭಿಣಿಯಾ ಗಿರುವ ಕಾರಣಕ್ಕೆ ಕುಟುಂಬದ ಗೌರವ ಉಳಿಸಲು ಮೂವರನ್ನೂ ಕೊಲೆ ಮಾಡಿದ್ದಾಗಿ ಆರೋಪಿ ಅಕ್ಷಯ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ತಂಗಿಗೆ ಬೆಂಬಲ ನೀಡುತ್ತಿದ್ದ ಕಾರಣಕ್ಕೆ ತಂದೆ, ತಾಯಿಯನ್ನೂ ಕೊಲೆ ಮಾಡಿದ್ದಾನೆ. ಕುಟುಂಬದ ಗೌರವ ಉಳಿಸಿಕೊಳ್ಳಲು ಮಾಡಿದ ಕೃತ್ಯ ಎಂದು ಹೇಳಿಕೊಂಡಿದ್ದಾನೆ. ತಂಗಿ ಅಮೃತ (18) ಮೂರು ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದ ನಂತರ ಕೋಪಗೊಂಡಿದ್ದ.
ನಾಲ್ಕು ತಿಂಗಳ ಹಿಂದೆ ಅಕ್ಷಯ್ ತಂಗಿಯ ಮೊಬೈಲ್ ಪರಿಶೀಲಿಸಿದ ವೇಳೆ ಪಿಯುಸಿ ಓದುತ್ತಿದ್ದ ಯುವಕನೊಂದಿಗೆ ಅವಳು ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಆ ಯುವಕನಿಗೆ ಕರೆ ಮಾಡಿದ ಅಕ್ಷಯ್, ಇಬ್ಬರ ನಡುವೆ ಪ್ರೇಮ ಸಂಬಂಧ ಇರುವುದನ್ನು ತಿಳಿದುಕೊಂಡಿದ್ದ. ಬಳಿಕ ತಂಗಿಗೆ ಹಲ್ಲೆ ಮಾಡಿ ಬೆದರಿಸಿದ್ದ, ಆಕೆ ನಾನು ಪ್ರೀತಿ ಮಾಡುವುದಿಲ್ಲ ಎಂದು ಕ್ಷಮೆ ಕೇಳಿದ್ದಳು. ಜನವರಿ 26ರಂದು ಅವಳು ಗರ್ಭಿಣಿ ಎಂಬ ವಿಚಾರ ಆರೋಪಿಗೆ ಗೊತ್ತಾಗಿದೆ.
ಗರ್ಭಪಾತ ಮಾಡಿಸೋಣ ಎಂದು ಅಕ್ಷಯ್ ಹೇಳಿದ್ದರೂ, ತಂದೆ-ತಾಯಿ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಆತ ತಂದೆ, ತಾಯಿ, ತಂಗಿಯನ್ನು ಕೊಲ್ಲುವ ನಿರ್ಧಾರ ಮಾಡಿದ್ದಾನೆ. ಜನವರಿ 26ರಂದು ಅಕ್ಷಯ್ ತಾಯಿಯನ್ನು ಕೊಂದಿದ್ದಾನೆ. ಬಳಿಕ ಸ್ನಾನ ಮಾಡಿ ರಕ್ತಸಿಕ್ತ ಬಟ್ಟೆಗಳನ್ನು ನಾಶಪಡಿಸಿದ್ದಾನೆ. ಸಂಜೆ ತಂಗಿ ಮನೆಗೆ ಬಂದಾಗ ಆಕೆಯನ್ನೂ ಕೊಲೆಗೈದು ತಾಯಿಯ ಮೃತದೇಹದ ಪಕ್ಕದಲ್ಲೇ ಮಲಗಿಸಿದ್ದಾನೆ. ಮತ್ತೆ ಸ್ನಾನ ಮಾಡಿದ್ದಾನೆ. ರಾತ್ರಿ ಕುಡಿದು ಮನೆಗೆ ಬಂದ ತಂದೆ ಸೋಫಾದ ಮೇಲೆ ಕೂತಿದ್ದಾಗ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾನೆ. ತಂದೆಯ ಮೃತದೇಹವನ್ನೂ ತಾಯಿ ಹಾಗೂ ತಂಗಿಯ ಪಕ್ಕ ಇಟ್ಟಿದ್ದಾನೆ. ನಂತರ ಕೊಠಡಿಗೆ ಬೀಗ ಹಾಕಿ ಮತ್ತೆ ಸ್ನಾನ ಮಾಡಿ ಬೇರೆ ಬಟ್ಟೆ ಧರಿಸಿದ್ದಾನೆ.
ಕೊಲೆಗಳ ಬಳಿಕ ರಾತ್ರಿಯಿಡೀ ಟಿವಿ ನೋಡುತ್ತಾ ತಪ್ಪಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸಿದ್ದಾನೆ. ಬೆಳಗ್ಗೆ ತಾಯಿ ಹಾಗೂ ತಂಗಿಯ ಮೊಬೈಲ್ ತೆಗೆದುಕೊಂಡು ಬೆಂಗಳೂರಿಗೆ ಬಂದ ಅಕ್ಷಯ್ ಆತನ ಮೊಬೈಲ್ ಮನೆಯಲ್ಲೇ ಬಿಟ್ಟುಬಂದಿದ್ದ. ಜಯದೇವ ಆಸ್ಪತ್ರೆ ಬಳಿ ಫೋಟೋ ತೆಗೆದು ತನ್ನ ಮೊಬೈಲ್ಗೆ ಕಳುಹಿಸಿದ್ದಾನೆ. ನಂತರ ಆ ಮೊಬೈಲ್‌ಗಳನ್ನು ಎಸೆದಿದ್ದಾನೆ.
ಅಕ್ಷಯ್ ತನ್ನ ಮಾವ ವಸಂತನನ್ನು ಭೇಟಿ ಮಾಡಿ ಎಲ್ಲ ವಿಚಾರ ತಿಳಿಸಿದ್ದಾನೆ. ಶವಗಳನ್ನು ಹೂತು ‘ಮಿಸ್ಸಿಂಗ್’ ನಾಟಕ ಆಡೋಣ ಎಂದು ಮಾವನೇ ಹೇಳಿದ್ದ. ಜನವರಿ 27ರ ರಾತ್ರಿ ಕೊಟ್ಟೂರಿಗೆ ವಾಪಸ್ ಆಗಿದ್ದ ಅಕ್ಷಯ್, ಟೈಲ್ಸ್ ಕಟರ್ ಹಾಗೂ ಡ್ರಿಲ್ಲಿಂಗ್ ಯಂತ್ರ ತರಿಸಿ, ಗುಂಡಿ ತೋಡಿ ಮೂವರ ಶವಗಳನ್ನು ಹೂತಿದ್ದಾನೆ.
ಅಕ್ಷಯ್ ಮಾವನೊಂದಿಗೆ ತಿಲಕನಗರ ಪೊಲೀಸ್ ಠಾಣೆಗೆ ಬಂದು ತಂದೆ-ತಾಯಿ-ತಂಗಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ. ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದ್ದು, ಅಕ್ಷಯ್ ಮತ್ತು ವಸಂತ ನನ್ನು ಬಂಧಿಸಲಾಗಿದೆ.
ತಂಗಿ ನಿಜವಾಗಿಯೂ ಗರ್ಭಿಣಿಯಾಗಿದ್ದಳೇ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿಯಬೇಕಿದೆ. ಆಕೆ ಅಪ್ರಾಪತ ವಯಸ್ಕಳಾಗಿದ್ದರೆ ಪ್ರಿಯತಮನ ವಿರುದ್ಧವೂ ಫೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.


