ಹೆಚ್ಐವಿ ಸೋಂಕು ಇದೆ ಎಂದು ತಿಳಿದು ಮರ್ಯಾದೆಗೆ ಅಂಜಿ ಒಡ ಹುಟ್ಟಿದ ತಮ್ಮನನ್ನು ಅಕ್ಕ ಮತ್ತು ಭಾವ ಸೇರಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೃತ ಮಲ್ಲಿಕಾರ್ಜುನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪರೇಷನ್ ವೇಳೆ ಮಲ್ಲಿಕಾರ್ಜುನ್ ಗೆ HIV ಇದೆ ಎಂದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಅಂಬ್ಯುಲೆನ್ಸ್ ನಲ್ಲಿ ೨೩ ವರ್ಷದ ಯುವಕ ಮಲ್ಲಿಕಾರ್ಜುನ್ ಗೆ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ಅಕ್ಕ ನಿಶಾ ಹಾಗೂ ಭಾವ ಮಂಜುನಾಥ್ ಕೊಲೆಗೈದವರು. ಮೃತದೇಹ ದುಮ್ಮಿ ಗ್ರಾಮಕ್ಕೆ ತಂದಿದ್ದ ವೇಳೆ ಅನುಮಾನಗೊಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಹೊಳಲ್ಕೆರೆ ಠಾಣೆಗೆ ಮಲ್ಲಿಕಾರ್ಜುನ್ ತಂದೆ ನಾಗರಾಜ್ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬಯಲಾಗಿದೆ.