ಮಧ್ಯಮ ವೇಗಿಗಳಾದ ಮೊಹಮದ್ ಸಿರಾಜ್ ಮತ್ತು ಅಕ್ಷ್ ದೀಪ್ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ 407 ರನ್ ಗೆ ಆಲೌಟಾಗಿದೆ. ಇದರೊಂದಿಗೆ ಭಾರತ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 180 ರನ್ ಭಾರೀ ಮುನ್ನಡೆ ಸಾಧಿಸಿದೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ ಇಂಗ್ಲೆಂಡ್ ತಂಡ ಜೆಮ್ಮಿ ಸ್ಮಿತ್ ಮತ್ತು ಹ್ಯಾರಿ ಬ್ರೂಕ್ ಶತಕಗಳ ಹೊರತಾಗಿಯೂ ಮೊದಲ ಇನಿಂಗ್ಸ್ ನಲ್ಲಿ 89.3 ಓವರ್ ಗಳಲ್ಲಿ 407 ರನ್ ಗೆ ಪತನಗೊಂಡಿತು.
ನಂತರ ಬ್ಯಾಟ್ ಮಾಡಿದ ಭಾರತ ತಂಡ ದಿನದಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿದ್ದು, ಒಟ್ಟಾರೆ 244 ರನ್ ಗಳ ಭಾರೀ ಮುನ್ನಡೆಯೊಂದಿಗೆ ಹಿಡಿತ ಸಾಧಿಸಿದೆ. ಕೆಎಲ್ ರಾಹುಲ್ 28 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಯಶಸ್ವಿ ಜೈಸ್ವಾಲ್ 28 ರನ್ ಗಳಿಸಿ ಔಟಾದರು.
ಭಾರತದ ಪರ ಮಾರಕ ದಾಳಿ ಸಂಘಟಿಸಿದ ಮೊಹಮದ್ ಸಿರಾಜ್ 70 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಅಕ್ಷ್ ದೀಪ್ 88 ರನ್ ನೀಡಿ 4 ವಿಕೆಟ್ ಪಡೆದರೆ, ಉಳಿದ ಯಾವುದೇ ಬೌಲರ್ ಗಳು ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು.
ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ 84 ರನ್ ಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಜೆಮ್ಮಿ ಸ್ಮಿತ್ ಮತ್ತು ಹ್ಯಾರಿ ಬ್ರೂಕ್ 6ನೇ ವಿಕೆಟ್ ಗೆ 303 ರನ್ ಗಳ ಬೃಹತ್ ಜೊತೆಯಾಟ ನಿಭಾಯಿಸಿದರು. ಅಕ್ಷ್ ದೀಪ್ ಈ ಜೊತೆಯಾಟ ಮುರಿದು ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಜೆಮ್ಮಿ ಸ್ಮಿತ್ 207 ಎಸೆತಗಳಲ್ಲಿ 21 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 184 ರನ್ ಗಳಿಸಿ ಅಜೇಯರಾಗಿ ಉಳಿದರೆ, ಬ್ರೂಕ್ 234 ಎಸೆತಗಳಲ್ಲಿ 17 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 158 ರನ್ ಬಾರಿಸಿದರು. ಇವರಿಬ್ಬರು ಔಟಾಗುತ್ತಿದ್ದಂತೆ 20 ರನ್ ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಕೊನೆಯ ಮೂವರು ಶೂನ್ಯಕ್ಕೆ ಔಟಾದರು.