“ಬೆಂಗಳೂರಿನಲ್ಲಿ ಸಿಂಗಪುರ ದೇಶವು ವ್ಯಾಪಾರ ವಹಿವಾಟು ನಡೆಸಲು ಹೆಚ್ಚು ಉತ್ಸುಕವಾಗಿದೆ. ತಂತ್ರಜ್ಞಾನ ಹಂಚಿಕೊಳ್ಳುವಿಕೆ ಸೇರಿದಂತೆ ಕೈಗಾರಿಕಾ ಪಾರ್ಕ್ ಆರಂಭಿಸುವ ಬಗ್ಗೆ ಸಿಂಗಾಪುರ ವಿದೇಶಾಂಗ ಸಚಿವರು ಚರ್ಚೆ ನಡೆಸಿದರು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿಂಗಾಪುರ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ಗಾನ್ ಶಿಯೋ ಹುಯಂಗ್ ಅವರ ನೇತೃತ್ವದ ಸಿಂಗಾಪುರ ಸರಕಾರದ ನಿಯೋಗದ ಜೊತೆ ಚರ್ಚೆ ನಡೆಸಿದ ಬಳಿಕ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಕಳೆದ ವರ್ಷ ಸಿಂಗಾಪುರದ ಕೌನ್ಸಲೇಟ್ ಗೆ ಬಂದಿದ್ದರು. ಗುರುವಾರ ಅವರು ಬೆಂಗಳೂರಿನಲ್ಲಿ ಕಚೇರಿ ಆರಂಭಿಸುತ್ತಿದ್ದಾರೆ. ಅವರು ಒಪ್ಪಿದರೆ ಒಂದು ಬಹುಮಹಡಿ ಕಟ್ಟಡ ನಿರ್ಮಿಸಿ ಅವರ ಎಲ್ಲಾ ಕಚೇರಿಗಳು ಒಂದೇ ಕಡೆ ಇರುವಂತೆ ಮಾಡಲು ಪ್ರಸ್ತಾವನೆ ನೀಡಿದ್ದೇನೆ. ನಾನು ಈ ವಿಚಾರವಾಗಿ ಬೇರೆ ದೇಶದವರ ಜೊತೆಗೂ ಮಾತನಾಡಿದ್ದೆ. ಭದ್ರತಾ ಉದ್ದೇಶದಿಂದ ಕೆಲವರು ಒಪ್ಪಿರಲಿಲ್ಲ. ಈಗ ಒಂದು ಪ್ರಯತ್ನ ಮಾಡುತ್ತಿದ್ದೇವೆ. ಹಲವು ದೇಶದ ಜನ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ಇಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ” ಎಂದು ತಿಳಿಸಿದರು.


