“ಕೇರಳ ಹಾಗೂ ಗೋವಾ ಮಾದರಿಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್ ಝಡ್ ) ಕಾನೂನು ಸರಳೀಕರಣ ಮಾಡಲಾಗುವುದು. ಇದರ ಬಗ್ಗೆ ಕೇಂದ್ರ ಪ್ರವಾಸೋದ್ಯಮ, ಪರಿಸರ ಸಚಿವರ ಬಳಿ ನಿಯೋಗ ತೆರಳಿ ಚರ್ಚೆ ನಡೆಸಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಮಂಗಳೂರಿನಲ್ಲಿ ನಡೆದ ‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026’ ರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಮುಖ್ಯಮಂತ್ರಿ ಸಮ್ಮುಖ ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಇತರೇ ಸಂಬಂಧಪಟ್ಟವರ ಜೊತೆ ಸಿಆರ್ ಜಡ್ ವಿಚಾರ ಚರ್ಚೆ ನಡೆಸಲಾಗಿದೆ. ಇಲ್ಲಿನ ಸಂಸದರಿಗೂ ಇದರ ಬಗ್ಗೆ ತಿಳಿಸಲಾಗಿದೆ. ಉದ್ಯಮಿಗಳು ಸೇರಿದಂತೆ ಅನೇಕರ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ ಎಂದರು.
ಮೂರು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ನೋಡಲ್ ಅಧಿಕಾರಿ ಸೇರಿದಂತೆ, ಏಕಗವಾಕ್ಷಿ ಏಜೆನ್ಸಿ ಪ್ರಾರಂಭ ಮಾಡಲಾಗುವುದು. ಯಾವುದೇ ವಿಚಾರವಿದ್ದರೂ ನನಗೆ ಪತ್ರದ ಮುಖೇನ ಅಥವಾ ಈ ಮೇಲ್ ಮೂಲಕ ತಿಳಿಸಿ ಎಂದು ಹೇಳಿದರು.
“ಕರಾವಳಿ ಸದಾ ಶಾಂತಿಯ ತೋಟವಾಗಿ ಉಳಿಯಬೇಕು ಎಂಬುದೇ ನಮ್ಮ ಸರ್ಕಾರದ ಚಿಂತನೆ. ಶಾಂತಿ ಸಾಮರಸ್ಯ ಉಳಿಯಬೇಕು ಎಂದರೆ ಯುವಕರಿಗೆ ಉದ್ಯೋಗ ದೊರೆಯಬೇಕು. ಇಲ್ಲಿ ಹುಟ್ಟಿ ಬೆಳೆದವರು ಹೊರಗೆ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರು ಮತ್ತೆ ಬಂದು ತಾವು ಹುಟ್ಟಿದ ಊರಿಗೆ ಕೊಡುಗೆ ನೀಡಬೇಕು. ಯಾರೇ ಇಲ್ಲಿಗೆ ಬಂದರು ಅವರು ಶಾಂತಿಯಿಂದ ವ್ಯವಹಾರ ನಡೆಸುವಂತಾಗಬೇಕು ಎಂದರು.
ಈ ಹಿಂದೆ ಉಡುಪಿಯ ಒಂದು ಶಿಕ್ಷಣ ಸಂಸ್ಥೆಯಲ್ಲಿ ಗಲಾಟೆ ನಡೆದಾಗ ಅನೇಕ ಶಿಕ್ಷಣ ಸಂಸ್ಥೆಯವರು ಬಂದು ನಮ್ಮಲ್ಲಿ ದಾಖಲಾತಿ ಕಡಿಮೆಯಾಗಿದೆ ಎಂದು ಅವಲತ್ತುಕೊಂಡಿದ್ದರು. ನನಗೆ ಆಶ್ಚರ್ಯಗೊಳಿಸಿದ ಇನ್ನೊಂದು ಸಂಗತಿ ಎಂದರೆ ಸುಮಾರು 87 ಸಾವಿರ ಪಿಯು ವಿದ್ಯಾರ್ಥಿಗಳು ಹೊರಗಡೆಯಿಂದ ಬಂದು ಈ ಎರಡು ಜಿಲ್ಲೆಗಳಿಂದ ತಯಾರಾಗುತ್ತಿದ್ದಾರೆ. ಇಲ್ಲಿನ ವಿದ್ಯಾ ಸಂಸ್ಥೆಗಳು ಶಿಸ್ತು, ಸಂಸ್ಕೃತಿ ಕಲಿಸುತ್ತಿವೆ ಎಂದರು.
ತೆರಿಗೆ ಸೇರಿದಂತೆ ಯಾವ ವಿಚಾರವಾಗಿ ರಾಜ್ಯ ಸರ್ಕಾರ ಸಹಾಯ ಮಾಡಬಹುದು ಎಂದು ಉದ್ಯಮಿಗಳು ಸಲಹೆ ನೀಡಬಹುದು. ಪ್ರವಾಸೋದ್ಯಮ, ಆರೋಗ್ಯ ಪ್ರವಾಸೋದ್ಯಮ ಸೇರಿದಂತೆ ಇನ್ಯಾವುದೇ ವಿಚಾರ ಇದ್ದರೂ ನಮ್ಮ ಸರ್ಕಾರ ಸಹಕಾರ ನೀಡುವುದು ಎಂದು ತಿಳಿಸಿದರು.
ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ಬ್ಯಾಂಕ್ ಗಳನ್ನು ನೀಡಿದ ನೆಲ ಕರಾವಳಿ. ಅವಿಭಜಿತ ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು ಹೊಂದಿರುವುದೇ ಹೆಗ್ಗಳಿಕೆ. ಆರೋಗ್ಯ, ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶ ಕರಾವಳಿ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಿದರು.
ವಿಮಾನ ನಿಲ್ದಾಣ, ಬಂದರು ಸೇರಿದಂತೆ ಅನೇಕ ಅನುಕೂಲ ಇದ್ದರು ಒಂದಷ್ಟು ವಿಚಾರದಲ್ಲಿ ಕೊರತೆ ಕಂಡು ಬರುತ್ತಿದೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಮಾಡಿದ ಐಟಿ ನೀತಿ ಬೆಂಗಳೂರಲ್ಲಿ ಯಶಸ್ವಿಯಾಯಿತು ಆದರೆ ಮಂಗಳೂರಿನಲ್ಲಿ ಆಗಲಿಲ್ಲ. ಇನ್ಫೋಸಿಸ್ ಸೇರಿದಂತೆ ಅನೇಕ ಕಂಪೆನಿಗಳು ಬಂದವು ,ಆದರೆ ಕಾಲಕಳೆದಂತೆ ಕ್ಷೀಣಿಸುತ್ತಾ ಹೋಯಿತು. ಇಲ್ಲಿನ ಯುವಕರು ಬೆಂಗಳೂರು, ಮುಂಬೈ, ದುಬೈನಲ್ಲಿ ಕೆಲಸ ಮಾಡುವಂತಾಗಿದೆ ಎಂದರು.
“ಮುಂಬೈ, ದುಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವವರು ಕರಾವಳಿಯ ಜನರೇ. ನಿಮಗೆ ಉದ್ದಿಮೆ ನಡೆಸುವ ಚಾಕಚಕ್ಯತೆಯಿದೆ. ಅದು ಇಲ್ಲಿ ಬಳಕೆಯಾಗಬೇಕು. ಚುನಾವಣೆ ಸಮಯದಲ್ಲಿ ಮಂಗಳೂರನದನು ನಾನು ಡೆಡ್ ಸಿಟಿ ಎಂದಿದ್ದೆ. ಆಗ ಬಿಜೆಪಿ ಶಾಸಕರು ಏಕೆ ಎಂದು ಪ್ರಶ್ನೆ ಮಾಡಿದ್ದರು. ನಾನು ಅದಕ್ಕೆ ಉತ್ತರ ನೀಡಿದ್ದೆ. ಆಗ ಅವರು ಒಪ್ಪಿಕೊಂಡರು. ಆಗ ನಮ್ಮ ಸರ್ಕಾರದ ಯೋಜನೆಗಳ ಅವರಿಗೆ ಹೇಳಿದಾಗ ನಾವು ಸಹ ಬೆಂಬಲ ನೀಡುವುದಾಗಿ ಹೇಳಿದ್ದರು” ಎಂದು ಹೇಳಿದರು.
“ಈ ಭಾಗದಲ್ಲಿ ನಾವು ಇಬ್ಬರು ಶಾಸಕರನ್ನು ಹೊಂದಿರಬಹುದು ಆದರೆ ನಮಗೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಮುಖ್ಯ. ಪಕ್ಷಾತೀತವಾಗಿ ಸಂಸದರು ಭಾಗವಹಿಸಿ ಬೆಂಬಲ ನೀಡಿದ್ದಾರೆ” ಎಂದರು.


