ನಾಗರ ಪಂಚಮಿಯಂದು ವಿಶೇಷವಾಗಿ ಕೆಲವು ಕಡೆಗಳಲ್ಲಿ ಅರಶಿಣ ಎಲೆಯ ಕಡುಬನ್ನು ಮಾಡುವುದು ರೂಢಿಯಲ್ಲಿದೆ. ಇದು ಬಹಳ ಸರಳ, ಆರೋಗ್ಯಕರ ಮತ್ತು ಮಾಡಲು ಸುಲಭವಾಗಿರುವ ತಿಂಡಿ. ಇದು ಬಾಯಿ ರುಚಿಗಿಂತ ಸೋಂಕು ನಿವಾರಕ ಶಕ್ತಿ ಹೊಂದಿರುವ ಅರಶಿಣ ಎಲೆ ಹೊಂದಿರುವ ಔಷಧೀಯ ಗುಣವನ್ನು ಈ ಋತುಮಾನದಲ್ಲಿ ನಮ್ಮ ದೇಹಕ್ಕೆ ಸೇರಿಸುವ ಒಂದು ಪ್ರಕ್ರಿಯೆಯೂ ಹೌದು.
ಇದನ್ನು ಮಾಡುವುದು ಹೇಗೆ: ನಿಮಗೆ ಬೇಕಿರುವಷ್ಟು ಅಕ್ಕಿ (ಬೆಳ್ತಿಗೆ/ಕುಚ್ಚಲು)ಯನ್ನು ಚೆನ್ನಾಗಿ ತೊಳೆದು ಐದು ಗಂಟೆ ನೆನೆಸಿಟ್ಟು ಬಳಿಕ ತೆಳು ಗಟ್ಟಿ ಅಲ್ಲದ ಮಧ್ಯಮ ಹದದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಿ, ಅರಶಿಣ ಎಲೆಯನ್ನು ಸ್ವಚ್ಛಗೊಳಿಸಿ ಒಣ ಬಟ್ಟೆಯಲ್ಲಿ ಒರೆಸಿದ ಬಳಿಕ ರುಬ್ಬಿಟ್ಟ ಹಿಟ್ಟನ್ನು ಆ ಎಲೆಗೆ ಸವರಿ ಅದರ ಮೇಲೆ ತುರಿದ ಕಾಯಿ, ಬೆಲ್ಲ, ಏಲಕ್ಕಿಪುಡಿ, ಸ್ವಲ್ಪ ತುಪ್ಪದ ಮಿಶ್ರಣವನ್ನು ಹರಡಿ ಎಲೆಯನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿಕೊಳ್ಳಿ. ಅಲ್ಲಿಗೆ ಆರೋಗ್ಯಕರ ಅರಶಿಣ ಕಡುಬು ತಿನ್ನಲು ರೆಡಿ.